Friday, September 5, 2025

ಬಾಯಿಗೆ ಬಂದ ರೀತಿ ಮಾತನಾಡಿದ್ರೆ ಸಹಿಸಲ್ಲ: ಟ್ರಂಪ್‌ ‘ದೇಶದ್ರೋಹ’ ಆರೋಪಕ್ಕೆ ಒಬಾಮ ಆಕ್ರೋಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ದೇಶದ್ರೋಹ” ಆರೋಪಗಳ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೌನ ಮುರಿದಿದ್ದಾರೆ. ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದನ್ನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ, ಒಬಾಮ ಆಡಳಿತದ ಅಧಿಕಾರಿಗಳು ಮಾಹಿತಿಯನ್ನು ಕುಶಲತೆಯಿಂದ ನಿರ್ವಹಿಸಿದ್ದಾರೆ ಎಂಬ ಆರೋಪವನ್ನು, ಡೊನಾಲ್ಡ್‌ ಟ್ರಂಪ್‌ ರಾಜಕೀಯ ಅಸ್ತ್ರವಾಗಿ ಬಳಸಿದ್ದಾರೆ. ಬರಾಕ್‌ ಒಬಾಮ ಮತ್ತು ಇತರರ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡಬೇಕು ಎಂದು ಅಮೆರಿಕದ ಅಧ್ಯಕ್ಷರು ಕರೆ ನೀಡಿದ್ದಾರೆ. ಜೊತೆಗೆ ಟ್ರಂಪ್‌ ಇತ್ತೀಚಿಗೆ ಬರಾಕ್‌ ಒಬಾಮ ಬಂಧನದ AI ವಿಡಿಯೋ ಹಂಚಿಕೊಂಡಿದ್ದರು.

ಡೊನಾಲ್ಡ್ ಟ್ರಂಪ್‌ ಅವರ ಆರೋಪಗಳಿಗ ಪ್ರತಿಕ್ರಿಯಿಸಿರುವ ಬರಾಕ್ ಒಬಾಮ ಅವರ ವಕ್ತಾರ ಪ್ಯಾಟ್ರಿಕ್ ರೋಡೆನ್‌ಬುಷ್, ‘ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಫೈಲ್‌ಗಳನ್ನು ಬಿಡುಗಡೆ ಮಾಡುವಲ್ಲಿ, ಆಡಳಿತದ ವೈಫಲ್ಯದ ಸುತ್ತ ಬೆಳೆಯುತ್ತಿರುವ ಬಿಕ್ಕಟ್ಟಿನಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಧ್ಯಕ್ಷರ ಕಚೇರಿಯ ಮೇಲಿನ ಗೌರವದಿಂದಾಗಿ, ನಮ್ಮ ಕಚೇರಿಯು ಶ್ವೇತಭವನದ ಅಸಂಬದ್ಧ ಮತ್ತು ತಪ್ಪು ಮಾಹಿತಿಯ ಬಗ್ಗೆ ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡಿವುದಿಲ್ಲ. ಆದರೆ ಈ ಹೇಳಿಕೆಗಳು ಅತಿರೇಕದಿಂದ ಕೂಡಿದ್ದು, ಈ ವಿಲಕ್ಷಣ ಆರೋಪಗಳು ಹಾಸ್ಯಾಸ್ಪದ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವ ದುರ್ಬಲ ಪ್ರಯತ್ನವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಬಿಡುಗಡೆ ಮಾಡಲಾದ ದಾಖಲೆಯಲ್ಲಿ, ರಷ್ಯಾ 2016ರ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಮಾರ್ಕೊ ರೂಬಿಯೊ ನೇತೃತ್ವದ ದ್ವಿಪಕ್ಷೀಯ ಸೆನೆಟ್ ಗುಪ್ತಚರ ಸಮಿತಿಯು, 2020ರಲ್ಲಿ ನೀಡಿದ ವರದಿಯಲ್ಲಿ ಇದನ್ನು ದೃಢಪಡಿಸಲಾಗಿದೆ ಎಂದು ದಾಖಲೆ ಹೇಳಿದೆ.

ಇದನ್ನೂ ಓದಿ