Saturday, October 18, 2025

‘ನನಗೆ ಒಂದು ರೂಪಾಯಿ ಬಂದಿಲ್ಲ’: ಬಿಗ್‌ಬಾಸ್ ಸಂಭಾವನೆ ಗುಟ್ಟು ಬಿಚ್ಚಿಟ್ಟ ಸತೀಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಿಂದ ಇತ್ತೀಚೆಗೆ ಎಲಿಮಿನೇಷನ್ ಆಗಿ ಹೊರಬಂದಿರುವ ಸ್ಪರ್ಧಿ ಸತೀಶ್, ಕಾರ್ಯಕ್ರಮದಲ್ಲಿ ತಮ್ಮ ಸಂಭಾವನೆ ಕುರಿತು ಆಶ್ಚರ್ಯಕರ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವೇದಿಕೆಯ ಮೇಲೆ ನಿಂತು, ಈ ಶೋಗೆಂದು ₹25 ಲಕ್ಷ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾಗಿ ಹೇಳಿದ್ದ ಸತೀಶ್‌ಗೆ, ಸ್ಪರ್ಧಿಯಾಗಿ ಮನೆಗೆ ಹೋಗಲು ಅದೆಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಸಹಜ ಕುತೂಹಲ ಎಲ್ಲರಿಗೂ ಇತ್ತು.

ಆದರೆ, ಡಾಗ್ ಸತೀಶ್ ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. “ಬಿಗ್‌ಬಾಸ್ ಕಾರ್ಯಕ್ರಮದಿಂದ ಇದುವರೆಗೂ ತಮಗೆ ಒಂದು ರೂಪಾಯಿ ಹಣ ಕೂಡ ಬಂದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ, ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಪ್ರವೇಶಿಸುವ ಪ್ರತಿ ಸ್ಪರ್ಧಿಯೂ ಒಂದು ನಿಗದಿತ ಮೊತ್ತದ ಸಂಭಾವನೆ ಪಡೆಯುತ್ತಾರೆ ಮತ್ತು ಪ್ರತಿ ವಾರವೂ ಅವರಿಗೆ ಹಣ ಸಂದಾಯವಾಗುತ್ತದೆ. ಆದರೆ, ಸತೀಶ್ ಅವರಿಗೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಮೊದಲು ನೀಡುವ ಅಡ್ವಾನ್ಸ್ ಹಣವೂ ಸೇರಿದಂತೆ ಬಳಿಕವೂ ಯಾವುದೇ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಿಗ್‌ಬಾಸ್ ತಂಡ ನೀಡಿದ ಕಾರಣವನ್ನೂ ಸತೀಶ್ ಉಲ್ಲೇಖಿಸಿದ್ದಾರೆ. “ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗಿಲ್ಲ, ಹಾಗಾಗಿ ನಿಮಗೆ ಹಣ ಟ್ರಾನ್ಸ್‌ಫರ್‌ ಆಗುತ್ತಿಲ್ಲ ಎಂದು ಟೀಮ್ ಹೇಳಿತ್ತು. ಆಗ ನಾನು, ಹಣವನ್ನ ಕೊಡಿ ಅಂತ ನಿಮ್ಮನ್ನು ಕೇಳಿದ್ನಾ? ಎಂದು ಪ್ರಶ್ನಿಸಿದೆ” ಎಂದಿದ್ದಾರೆ.

ತಮ್ಮ ಆದ್ಯತೆಯನ್ನು ಸ್ಪಷ್ಟಪಡಿಸಿದ ಸತೀಶ್, “ನನಗೆ ಹಣ ಮುಖ್ಯವಲ್ಲ, ನನ್ನ ಟರ್ನ್ವೋವರ್ ಚೆನ್ನಾಗಿದೆ. ನನಗೆ ಜನರ ಮುಂದೆ ಗುರುತಿಸಿಕೊಳ್ಳುವುದು ಮುಖ್ಯ. ವೇದಿಕೆ ಮುಖ್ಯವಾಗಿತ್ತು. ನಾನು ಒಂದು ಸಿನಿಮಾ ಕಾರ್ಯಕ್ರಮಕ್ಕೆ ನಾಯಿ ಹಿಡಿದುಕೊಂಡು ಹೋದರೆ ಸಾಕು ಲಕ್ಷ ಲಕ್ಷ ಹಣ ಕೊಡುತ್ತಾರೆ. ಬಿಗ್‌ಬಾಸ್ ಮನೆಯಲ್ಲಿರುವವರೆಲ್ಲ ಗೆಸ್ಟ್ ಆಗಿ ಹೋದರೆ ಮೂವತ್ತೋ ನಲವತ್ತೋ ಸಾವಿರ ಕೊಡುತ್ತಾರಂತೆ,” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಬಿಗ್‌ಬಾಸ್‌ನಿಂದ ಬರುವ ಸಂಭಾವನೆಗಿಂತ, ಆ ವೇದಿಕೆಯ ಮೂಲಕ ಜನಪ್ರಿಯತೆ ಗಳಿಸುವುದು ತಮಗೆ ಮಹತ್ವದ್ದು ಎಂದು ಸತೀಶ್ ಈ ಮೂಲಕ ಸಾರಿದ್ದಾರೆ.

error: Content is protected !!