ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟಿಸಿರುವ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಕುರಿತ ವರದಿಗಳ ಬಗ್ಗೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ತಾವು ದೂರವಿದ್ದು, ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಾರಾಮತಿಯಲ್ಲಿ ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಈ ವಿಷಯವನ್ನು ಮಾಧ್ಯಮ ವರದಿಗಳ ಮೂಲಕವೇ ತಿಳಿದುಕೊಂಡಿರುವುದಾಗಿ ಹೇಳಿದರು. ಪ್ರಮಾಣವಚನ ಸ್ವೀಕಾರದ ಕುರಿತು ಪಕ್ಷದ ಮಟ್ಟದಲ್ಲಿಯೂ ನನಗೆ ಮಾಹಿತಿ ನೀಡಲಾಗಿಲ್ಲ ಎಂದರು. ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸುವ ಕುರಿತು ಕೇಳಿದಾಗ, ಈ ನಿರ್ಧಾರವನ್ನು ಎನ್‌ಸಿಪಿಯೇ ತೆಗೆದುಕೊಂಡಿರಬಹುದು ಎಂದು ಉತ್ತರಿಸಿದರು.
ಇದನ್ನೂ ಓದಿ:
ಪ್ರಫುಲ್ ಪಟೇಲ್ ಹಾಗೂ ಸುನಿಲ್ ತತ್ಕರೆ ಸೇರಿದಂತೆ ಕೆಲ ನಾಯಕರು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರಬಹುದು ಎಂದು ಶರದ್ ಪವಾರ್ ಅಭಿಪ್ರಾಯಪಟ್ಟರು. ಎನ್‌ಸಿಪಿಯ ಎರಡೂ ಬಣಗಳ ವಿಲೀನ ಅಜಿತ್ ಪವಾರ್ ಅವರ ಕನಸಾಗಿತ್ತು ಎಂದು ಹೇಳಿದ ಅವರು, ಈ ಸಂಬಂಧ ಮಾತುಕತೆಗಳು ನಡೆದಿದ್ದವು ಎಂದರು. ಫೆಬ್ರವರಿ 12ಕ್ಕೆ ವಿಲೀನ ದಿನಾಂಕ ನಿಗದಿಯಾಗಿತ್ತು ಎಂಬುದನ್ನೂ ಅವರು ನೆನಪಿಸಿದರು.



