ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ಸಂಘರ್ಷ ಸೇರಿದಂತೆ ಏಳು ಯುದ್ಧವನ್ನು ನಾವು ನಿಲ್ಲಿಸಿದ್ದೇವೆ, ಹಾಗಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದಾರೆ.
ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದೇವೆ ಮತ್ತು ನಾವು ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ಆದ್ದರಿಂದ ನಾವು ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇವೆ ಎಂದು ಟ್ರಂಪ್ ಅಮೇರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಸ್ಥಾಪಕರ ಭೋಜನಕೂಟದಲ್ಲಿ ಹೇಳಿದರು.
ಭಾರತ ಹಾಗೂ ಪಾಕಿಸ್ತಾನಕ್ಕೆ ನಾನುವ್ಯಾಪಾರದ ಬಹಿಷ್ಕಾರದ ಎಚ್ಚರಿಕೆ ನೀಡಿದ್ದೆ. ನನ್ನ ಮಾತನ್ನು ಉಭಯ ದೇಶಗಳ ನಾಯಕರು ಗೌರವಿಸಿದರು. ನನಗೆ ಇಬ್ಬರೂ ನಾಯಕರ ಬಗ್ಗೆ ಅಪಾರ ಗೌರವವಿದೆ. ಇಷ್ಟೇ ಅಲ್ಲ, ನಾನು ಥೈಲ್ಯಾಂಡ್, ಕಾಂಬೋಡಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮುಂದಿರುವ ಸವಾಲೆಂದರೆ, ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವುದು. ನಾನು ಅಧ್ಯಕ್ಷ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಅವರ ಜೊತೆ ಮಾತುಕತೆನ್ನೂ ನಡೆಸಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಹಿಂದೆ ಜಾಗತಿಕ ಶಾಂತಿ ಸ್ಥಾಪನೆ ಪ್ರಯತ್ನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮನವಿ ಮಾಡಿದ್ದರು.