Sunday, January 11, 2026

ʼಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಕೊಂಡ ಮೇಲೆ ಕನ್ನಡ ಕಲಿಯಲೇಬೇಕುʼ

ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

70ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಕಚೇರಿಗಳು, ಅಂಗಡಿ – ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಆದೇಶವನ್ನು ಹೊರಡಿಸಿದ್ದೇವೆ. ಬೇರೆ ಭಾಷೆಗಳನ್ನು ಗೌರವಿಸೋಣ. ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ.

ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ ಎಂದು ತಿಳಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!