ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕತ್ವದ ಇನಿಂಗ್ಸ್ ನೀಡಿದವರು ಸಂಜು ಸ್ಯಾಮ್ಸನ್.
ಕೇವಲ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಬೌಂಡರಿಗಳ ನೆರವಿನಿಂದ ಅಜೇಯ 97 ರನ್ ಸಿಡಿಸಿ ತಂಡವನ್ನು 19.2 ಓವರ್‌ಗಳಲ್ಲಿ 5 ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದರು. ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಅವರಿಗೆ ಲಭಿಸಿತು.
ಇದನ್ನೂ ಓದಿ:
ಈ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ದೇಶಕ್ಕಾಗಿ ಇಂತಹ ಇನಿಂಗ್ಸ್ ಆಡುವುದು ತನ್ನ ಕನಸಾಗಿತ್ತು ಎಂದು ಭಾವುಕರಾಗಿ ಹೇಳಿದರು. ಕ್ರಿಕೆಟ್ ಜೀವನದಲ್ಲಿ ಏರಿಳಿತಗಳು ಇದ್ದರೂ ನನ್ನ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ. ಇಂದಿನ ದಿನ ಅದಕ್ಕೆ ಸಾಕ್ಷಿ, ಎಂದು ಅವರು ಪ್ರತಿಕ್ರಿಯಿಸಿದರು.
ತಂಡದಲ್ಲಿ ಅವಕಾಶ ಸಿಗದ ಸಂದರ್ಭಗಳಲ್ಲಿ ಬೆಂಚ್‌ನಲ್ಲಿ ಕುಳಿತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಪಂದ್ಯವನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಗಮನಿಸಿದ್ದೆ. ದೊಡ್ಡ ಗುರಿ ಬೆನ್ನಟ್ಟುವಾಗ ತಾಳ್ಮೆ ಹಾಗೂ ತಂತ್ರದ ಮಹತ್ವವನ್ನು ಅವರಿಂದಲೇ ಕಲಿತೆ ಎಂದು ಸ್ಯಾಮ್ಸನ್ ಹೇಳಿದರು. ತಮ್ಮ ಈ ಸಾಧನೆಗೆ ಹಿರಿಯ ಆಟಗಾರರ ಪ್ರೇರಣೆ ಪ್ರಮುಖ ಕಾರಣವೆಂದೂ ಅವರು ಉಲ್ಲೇಖಿಸಿದರು.



