Sunday, December 14, 2025

ಜಮ್ಮುವಿನ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೆ…ಆ ದಿನ ಮೆಲುಕು ಹಾಕಿದ ಉಗ್ರ ಮಸೂದ್ ಅಝರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮುವಿನಲ್ಲಿ ಬಂಧನದಲ್ಲಿದ್ದ ಸಮಯದಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್ ಜೈಲಿನಿಂದ ಪರಾರಿಯಾಗುವಂತೆ ಉಗ್ರರ ತಂಡ ರೂಪಿಸಿದ್ದ ಭೀಕರ ಸಂಚು ವಿಫಲ ಆಗಿದ್ದ ಘಟನೆ ಬಗ್ಗೆ ಮೆಲಕು ಹಾಕಿದ್ದಾನೆ.

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರ ಆಡಿಯೊ ವೈರಲ್ ಆಗಿದ್ದು, ಇದರಲ್ಲಿ ಆತ ಜಮ್ಮುವಿನ ಜೈಲಿನಲ್ಲಿದ್ದಾಗ ಅಲ್ಲಿ ಸುರಂಗವನ್ನು ಅಗೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಇದರ ಪರಿಣಾಮದಿಂದ ಹೆಚ್ಚು ಕಠಿಣ ಶಿಕ್ಷೆಗೆ ಒಳಗಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.

ಈ ಘಟನೆಯ ನಂತರ ಸೇನಾ ಸಿಬ್ಬಂದಿ ತನ್ನ ಮೇಲೆ ಹೀನಾಯವಾಗಿ ಹಲ್ಲೆ ನಡೆಸಿದ್ದರು ಎಂದಿದ್ದು, ಆ ಬಳಿಕ ನಾನು ಮಾನಸಿಕ ಹಾಗೂ ದೈಹಿಕವಾಗಿ ಯಾತನೆಗೆ ಒಳಗಾಗಿದೆ ಎಂದು ಹೇಳಿದ್ದಾನೆ.

ಭಾರತದ ಸಂಸತ್ತಿನ ಮೇಲೆ 2001ರಲ್ಲಿ ನಡೆದ ದಾಳಿ ಹಾಗೂ ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಅಜರ್ ನನ್ನು 1994ರಲ್ಲಿ ಬಂಧಿಸಲಾಗಿತ್ತು.

ಜಮ್ಮುವಿನ ಜೈಲಿನಲ್ಲಿ ಬಂಧಿತನಾಗಿದ್ದ ಸಂದರ್ಭದಲ್ಲಿ ತನ್ನನ್ನು ಬಿಡುಗಡೆಗೊಳಿಸಲು ಉಗ್ರ ಸಂಘಟನೆಯ ಸಹಚರರು ರೂಪಿಸಿದ್ದ ಸಂಚು ಸಂಪೂರ್ಣವಾಗಿ ವಿಫಲವಾಯಿತು. ಭದ್ರತಾ ಪಡೆಗಳು ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ್ದರಿಂದ ನನ್ನ ಸಹಚರರು ರೂಪಿಸಿದ್ದ ಸಂಚನ್ನು ಭೇದಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂದಿದ್ದಾನೆ.

ಈ ಘಟನೆಯ ನಂತರ ಆತ ಭದ್ರತಾ ಸಿಬ್ಬಂದಿ ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೈಲಿನೊಳಗೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ. ಈ ಘಟನೆಯು ತನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು ಎಂದು ಆತ ತನ್ನ ಬೆಂಬಲಿಗರ ಮುಂದೆ ಹೇಳಿಕೊಂಡಿದ್ದಾನೆ.

ಭಾರತದ ಭದ್ರತಾ ಸಂಸ್ಥೆಗಳ ಪ್ರಕಾರ, ಮಸೂದ್ ಅಝರ್ ಹಲವು ಭಯೋತ್ಪಾದಕ ದಾಳಿಗಳ ಹಿಂದಿರುವ ಪ್ರಮುಖ ಸೂತ್ರಧಾರನಾಗಿದ್ದು, ಪಠಾಣ್‌ಕೋಟ್ ದಾಳಿ, ಪುಲ್ವಾಮಾ ಆತ್ಮಾಹುತಿ ದಾಳಿ ಸೇರಿದಂತೆ ಅನೇಕ ಉಗ್ರ ಕೃತ್ಯಗಳಿಗೆ ಸಂಬಂಧ ಹೊಂದಿದ್ದಾನೆ. ಭಾರತ ಮಾತ್ರವಲ್ಲದೆ, ಅಮೆರಿಕ ಹಾಗೂ ಇತರ ಹಲವು ರಾಷ್ಟ್ರಗಳು ಆತನನ್ನು ಭಯೋತ್ಪಾದಕನಾಗಿ ಘೋಷಿಸಿವೆ. 2019ರಲ್ಲಿ ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿ ಕೂಡಾ ಅಝರ್ ಅನ್ನು ಜಾಗತಿಕ ಉಗ್ರ ಎಂದು ಘೋಷಿಸಿತು.

ಇಂತಹ ಹೇಳಿಕೆಗಳ ಮೂಲಕ ಮಸೂದ್ ಅಝರ್ ತನ್ನ ಅನುಯಾಯಿಗಳಲ್ಲಿ ಸಹಾನುಭೂತಿ ಹುಟ್ಟುಹಾಕುವ ಹಾಗೂ ತನ್ನ ಉಗ್ರ ಚಟುವಟಿಕೆಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸುತ್ತಿದ್ದಾನೆ. ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದ ವಿಫಲ ಯತ್ನ ಹಾಗೂ ಹಲ್ಲೆ ಕುರಿತ ಕಥನವನ್ನು ಬಳಸಿಕೊಂಡು ತನ್ನನ್ನು ‘ಹಿಂಸೆಗೆ ಒಳಗಾದ ವ್ಯಕ್ತಿ’ ಎಂದು ಚಿತ್ರಿಸುವುದು ಆತನ ಉದ್ದೇಶವಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಆದರೆ ಭಾರತದ ಭದ್ರತಾ ಪಡೆಗಳು ಉಗ್ರ ಸಂಘಟನೆಗಳ ಯಾವುದೇ ಸಂಚುಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿವೆ. ದೇಶದ ಭದ್ರತೆ ಮತ್ತು ನಾಗರಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !!