ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಸಿಂದೂರದ ಬಗ್ಗೆ ಚರ್ಚೆ ನಡೆಯುತ್ತಿದೆ ಈ ವೇಳೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ಏಪ್ರಿಲ್ 22 ರಿಂದ ಜೂನ್ 17 ವರೆಗೆ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾದ ಮಾತುಕತೆಯ ಬಳಿಕ ಕದನವಿರಾಮ ಘೋಷಿಸಲಾಯಿತು ಎಂದು ಪ್ರತಿಪಾದಿಸಿದ್ದರು. ಆದರೆ, ಅತ್ತ ಇಂಗ್ಲೆಂಡ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಾನೇ ಭಾರತ-ಪಾಕಿಸ್ತಾನದ ನಡುವೆ ಯುದ್ಧವಾಗುವುದನ್ನು ತಡೆದಿದ್ದು ಎಂದು ಘೋಷಿಸಿದ್ದಾರೆ.
ಅಧಿಕೃತ ಮಾತುಕತೆಗೆ ಮುನ್ನ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗೆ ಸ್ಕಾಟ್ಲೆಂಡ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಸೇರಿದಂತೆ ಒಟ್ಟು 6 ಪ್ರಮುಖ ಯುದ್ಧಗಳನ್ನು ತಡೆಯಲು ನಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮತ್ತೊಮ್ಮೆ, ಎಲ್ಲಾ ವ್ಯಾಪಾರ ಮಾತುಕತೆಗಳನ್ನು ನಿಲ್ಲಿಸುವ ಬೆದರಿಕೆಯೊಂದಿಗೆ ತಾನು ಸಕಾಲದಲ್ಲಿ ಮಧ್ಯಪ್ರವೇಶಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಹಮಾಸ್ ಜೊತೆಗಿನ ಕದನ ವಿರಾಮ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಗಾಜಾದಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಇಸ್ರೇಲ್ ಅನ್ನು ಒತ್ತಾಯಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುವಾಗ ಭಾರತ-ಪಾಕ್ ಪ್ರಸ್ತಾಪವನ್ನೂ ಮಾಡಿದ್ದಾರೆ.
ನಾನು ಇಲ್ಲದಿದ್ದರೆ ನೀವು 6 ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಬೇಕಿತ್ತು. ಭಾರತ ಪಾಕಿಸ್ತಾನದೊಂದಿಗೆ ಹೋರಾಡುತ್ತಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡದಿದ್ದರೆ ಅದರ ಪರಿಣಾಮ ಕೆಟ್ಟದಾಗಿರುತ್ತಿತ್ತು. ಎರಡು ಪರಮಾಣು ರಾಷ್ಟ್ರಗಳ ನಡುವೆ ಯುದ್ಧ ನಡೆದರೆ ಅದರ ಪರಿಣಾಮ ಎಷ್ಟು ದೊಡ್ಡದಾಗಿರಬಹುದು ಎಂದು ನೀವೇ ಊಹಿ’ ಎಂದು ಟ್ರಂಪ್ ಸ್ಕಾಟ್ಲೆಂಡ್‌ನ ದಕ್ಷಿಣ ಐರ್‌ಶೈರ್‌ನಲ್ಲಿರುವ ತಮ್ಮ ಟರ್ನ್‌ಬೆರಿ ಗಾಲ್ಫ್ ರೆಸಾರ್ಟ್‌ನಿಂದ ಮಾಧ್ಯಮಗಳನ್ನುದ್ದೇಶಿಸಿ ಹೇಳಿದ್ದಾರೆ.
ನನಗೆ ಪಾಕಿಸ್ತಾನ ಮತ್ತು ಭಾರತ ದೇಶದನಾಯಕರು ಆಪ್ತರು. ಅವರು ವ್ಯಾಪಾರ ಒಪ್ಪಂದದ ಮಧ್ಯದಲ್ಲಿದ್ದಾರೆ. ಆದರೆ ಅವರು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಹುಚ್ಚುತನ. ಹಾಗಾಗಿ, ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಅವರು ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಲು ಬಯಸಲಿಲ್ಲ. ಅವರಿಗೆ ಅದು ಬಹಳ ಅಗತ್ಯವಿದೆ. ನೀವು ಯುದ್ಧ ಮಾಡಲು ನಿರ್ಧರಿಸಿದರೆ ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಅದಕ್ಕೆ ಆ ಎರಡೂ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡವು ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.
ಆದರೆ, ಇಂದು ಸದನದಲ್ಲಿ ಮತ್ತೊಮ್ಮೆ ವಿದೇಶಾಂಗ ಸಚಿವ ಜೈಶಂಕರ್ ಕದನವಿರಾಮದಲ್ಲಿ ಅಮೆರಿಕದ ಯಾವುದೇ ಮಧ್ಯಸ್ಥಿಕೆಯೂ ಇರಲಿಲ್ಲ ಎಂದು ಖಚಿತಪಡಿಸಿದ್ದರು.