Friday, November 28, 2025

ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಜಿ20 ಶೃಂಗಸಭೆಗೆ ನಾನು ಹೋಗೋದಿಲ್ಲ: ಡೊನಾಲ್ಡ್ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಜೊತೆಗೆ, ದಕ್ಷಿಣ ಆಫ್ರಿಕಾ ಈಗಲೂ ಈ ಪ್ರಮುಖ ಆರ್ಥಿಕ ರಾಷ್ಟ್ರಗಳ ಗುಂಪಿನಲ್ಲಿ ಇರಬೇಕೆಂಬುದರ ಮೇಲೂ ಪ್ರಶ್ನೆ ಎಬ್ಬಿಸಿದ್ದಾರೆ.

ದಕ್ಷಿಣ ಆಫ್ರಿಕಾ, 2024 ಡಿಸೆಂಬರ್ 1 ರಂದು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ನವೆಂಬರ್ 22 ರಿಂದ 23 ರವರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಶೃಂಗಸಭೆಯನ್ನು ಆಯೋಜಿಸಿದೆ. ಇದು ಆಫ್ರಿಕಾ ಖಂಡದಲ್ಲಿ ಮೊದಲ ಬಾರಿಗೆ ಜಿ20 ನಾಯಕರು ಸಭೆಯಾಗುತ್ತಿರುವ ಮಹತ್ವದ ಕ್ಷಣವಾಗಿದೆ.

ಟ್ರಂಪ್ ಅವರು ಫ್ಲೋರಿಡಾದ ಮೈಯಾಮಿಯಲ್ಲಿ ನಡೆದ ಅಮೆರಿಕಾ ಬಿಸಿನೆಸ್ ಫೋರಂನಲ್ಲಿ ಮಾತನಾಡುತ್ತಾ, “ನಾನು ಹೋಗುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಜಿ20 ಸಭೆ ಇದೆ, ಆದರೆ ಅದು ಈಗಾಗಲೇ ಜಿ ರಾಷ್ಟ್ರಗಳಲ್ಲಿ ಇರಬಾರದು. ಅಲ್ಲಿ ನಡೆದಿರುವ ಬೆಳವಣಿಗೆಗಳು ತುಂಬಾ ಕೆಟ್ಟದಾಗಿವೆ. ನಾನು ಅವರಿಗೆ ಹೇಳಿದ್ದೇನೆ — ನಾನು ಹೋಗುವುದಿಲ್ಲ, ನಮ್ಮ ದೇಶವನ್ನು ಅಲ್ಲಿ ಪ್ರತಿನಿಧಿಸುವುದಿಲ್ಲ. ಆ ಸಭೆ ಅಲ್ಲಿ ನಡೆಯಬಾರದು,” ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಟ್ರಂಪ್ ಮತ್ತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿವಾದ ಸೃಷ್ಟಿಸಿದ್ದು, ಅಮೆರಿಕದ ವಿದೇಶಾಂಗ ನೀತಿ ಕುರಿತ ಚರ್ಚೆಗಳಿಗೆ ಹೊಸ ಆಯಾಮವನ್ನು ತೆರೆದಿದ್ದಾರೆ.

error: Content is protected !!