ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹಾಗೂ ಕುಟುಂಬದ ವಿರುದ್ಧ ಬಂದಿರುವ ಬೆದರಿಕೆ ಕರೆಗಳ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಬೆದರಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢ ನಿಲುವನ್ನು ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಬೆದರಿಕೆ ಕರೆಗಳು ಬಂದಿದ್ದವು. ನಮ್ಮ ತಂದೆ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹಲವು ಬಾರಿ ಲ್ಯಾಂಡ್‌ಲೈನ್ ಮೂಲಕ ಬೆದರಿಕೆ ಹಾಕಲಾಗಿತ್ತು. ಈಗಲೂ ಈ ಸಂಬಂಧ ಸಫ್ದರ್ ಜಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಮನೆಯಲ್ಲಿ ಇದ್ದಾಗ ರಾತ್ರಿ ವೇಳೆ ಕೂಡ ಬೆದರಿಕೆ ಕರೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಈ ರೀತಿಯ ಘಟನೆಗಳು ನಮ್ಮ ಕುಟುಂಬಕ್ಕೆ ಹೊಸದಲ್ಲ. ನನಗೆ ನಿರಂತರವಾಗಿ ವಾಟ್ಸಪ್ ಕಾಲ್‌ಗಳು ಹಾಗೂ ಬೆದರಿಕೆ ಕರೆಗಳು ಬರುತ್ತಿವೆ. ಇವು ಎನ್‌ಕ್ರಿಪ್ಟೆಡ್ ಕಾಲ್‌ಗಳಾಗಿರುವುದರಿಂದ ಟ್ರೇಸ್ ಮಾಡುವುದು ಕಷ್ಟಕರ. ಆದ್ದರಿಂದ ಭಯಪಡುವ ಪ್ರಶ್ನೆಯೇ ಇಲ್ಲ, ಎಂದು ಖರ್ಗೆ ಹೇಳಿದರು.
ಆರ್‌ಎಸ್‌ಎಸ್ ಹಾಗೂ ಬಲಪಂಥೀಯ ಸಂಘಟನೆಗಳ ತತ್ವಗಳನ್ನು ಖಂಡಿಸಿದ ಅವರು, “ಈ ರೀತಿಯ ರಾಜಕೀಯ ಹೊಸದೇನಲ್ಲ. ನೂರು ವರ್ಷಗಳಿಂದ ಜನರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ನಾವು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತದ ಮಾರ್ಗದಲ್ಲಿದ್ದೇವೆ. ಸಂವಿಧಾನದ ಮೇಲೆ ನನ್ನ ನಂಬಿಕೆ ಅಚಲವಾಗಿದೆ,” ಎಂದು ಖರ್ಗೆ ಸ್ಪಷ್ಟಪಡಿಸಿದರು.