ಹೊಸದಿಗಂತ ವರದಿ, ಬೆಳಗಾವಿ :
ಎಲ್ಲಿಯವರೆಗೆ ಕೈಕಾಲಲ್ಲಿ ಶಕ್ತಿ ಇರುತ್ತದೆಯೋ, ಎಲ್ಲಿಯವರೆಗೆ ಮೈಯಲ್ಲಿ ರಕ್ತ ಇರುತ್ತದೆಯೋ ಅಲ್ಲಿವರೆಗೆ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಅಂಬೇವಾಡಿ ಗ್ರಾಮದಲ್ಲಿ ನೂತನ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ನಾನು ಕೇವಲ ಚುನಾವಣೆಯ 2 ತಿಂಗಳಲ್ಲಿ ಮಾತ್ರ ರಾಜಕಾರಣ ಮಾಡುವವಳು. ಉಳಿದ ದಿನಗಳಲ್ಲಿ ದಿನದ 24 ಗಂಟೆಯೂ ಕ್ಷೇತ್ರದ ಅಬಿವೃದ್ಧಿಯ ಕುರಿತೇ ಚಿಂತಿಸುತ್ತೇನೆ. ಕ್ಷೇತ್ರದಲ್ಲಿ 152 ದೇವಸ್ಥಾನ ಸೇರಿದಂತೆ ಕೇಳಿದಲ್ಲೆಲ್ಲ ಮಹಾನ್ ನಾಯಕರ ಪುತ್ಥಳಿ, ಸಮುದಾಯ ಭವನ, ರಸ್ತೆ, ಗಟಾರ, ಶಾಲಾ ಕೊಠಡಿ ಎಲ್ಲವನ್ನೂ ಮಾಡಿಕೊಡುತ್ತಿದ್ದೇನೆ. ಬೇರೆಯವರಂತೆ ಚುನಾವಣೆ ಬಂದಾಗ ಮಾತ್ರ ಬರುವವಳು ನಾನಲ್ಲ. ಹಾಗಾಗಿ ನೀವೆಲ್ಲ ಸದಾ ನನ್ನ ಜೊತೆಗೆ ನಿಲ್ಲಬೇಕು ಎಂದು ಅವರು ಹೇಳಿದರು.
ಶಿವಾಜಿ ಮಹಾರಾಜರು ಕತ್ತಿಯಿಂದ ಮಾತ್ರ ರಾಜ್ಯ ಕಟ್ಟಲಿಲ್ಲ, ಅವರು ನ್ಯಾಯದಿಂದ, ಶಿಸ್ತಿನಿಂದ, ಜನರ ಮೇಲಿನ ಪ್ರೀತಿಯಿಂದ ಸಾಮ್ರಾಜ್ಯ ನಿರ್ಮಿಸಿದರು. ಮಹಿಳೆಯರ ಗೌರವವನ್ನು ರಕ್ಷಿಸಿದ ಮೊದಲ ಆಡಳಿತಗಾರರಲ್ಲಿ ಶಿವಾಜಿ ಮಹಾರಾಜರು ಪ್ರಮುಖರು. ಶತ್ರುವಿನ ಕೋಟೆ ಗೆದ್ದರೂ, ಮಹಿಳೆಯರನ್ನು ಕಣ್ಣೆತ್ತಿ ನೋಡದ ಸಂಸ್ಕಾರ – ಇದೇ ನಿಜವಾದ ವೀರತ್ವ. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ರಾಜನಾಗಿದ್ದರಿಂದ ಮಹಾನ್ ಅಲ್ಲ, ನ್ಯಾಯವಂತನಾಗಿದ್ದರಿಂದ ಇತಿಹಾಸ ಪುಟ ಸೇರಿದರು. ಮಹಿಳೆಯರ ಗೌರವವೇ ರಾಜ್ಯದ ಗೌರವ ಎಂದು ಆಡಳಿತದಲ್ಲಿ ಜಾರಿಗೆ ತಂದ ಮೊದಲ ನಾಯಕ ಅವರು ಎಂದು ಹೆಬ್ಬಾಳ್ಕರ್ ಹೇಳಿದರು.
ಈ ವೇಳೆ ಕಾಡಾ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳ್ಕರ್, ಬಾಳು ದೇಸೂರಕರ್, ಶಿವಾಜಿ ಅತವಾಡ್ಕರ್, ಪ್ರಕಾಶ ಗೋಪೆ, ಸುನೀಲ ರಕ್ಷೆ, ರಮೇಶ ರೆಡೆಕರ್, ಜಯವಂತ ಬಾಳೇಕುಂದ್ರಿ, ಶಿವಾಜಿ ಹಂಡೆ, ಮಥುರಾ ತೆರಸೆ, ಶ್ರೀಕಾಂತ ದೇಸಾಯಿ, ಲಕ್ಷ್ಮಿ ಯಳಗುರಕರ್, ಬಾಲಕೃಷ್ಣ ತೆರಸೆ,ತಾನಾಜಿ ಅಥವಾಡ್ಕರ್, ಅನಂತ ತುಡೇಕರ, ಪಿ.ಕೆ.ತೆಳ್ಳಿ, ವಿನಾಯಕ ಕಾತಕರ, ಅಮೂಲ ಬಾತ್ಕಂಡೆ ಸೇರಿದಂತೆ ಹಲವರು ಇದ್ದರು.



