Saturday, November 8, 2025

ಹಾರಿಸ್ ರೌಫ್‌ಗೆ ICC ನಿಷೇಧ: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಿಂದ ಹೊರಗುಳಿದ ಪಾಕ್ ವೇಗಿ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪ್ರಮುಖ ವೇಗಿ ಹಾರಿಸ್ ರೌಫ್ ವಿರುದ್ಧ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶಿಸ್ತು ಕ್ರಮ ಕೈಗೊಂಡಿದೆ. ಏಷ್ಯಾಕಪ್ ವೇಳೆ ಕ್ರೀಡಾ ಘನತೆಗೆ ಧಕ್ಕೆ ತಂದ ಕಾರಣದಿಂದಾಗಿ ಹಾರಿಸ್ ರೌಫ್‌ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ. ಇದರ ಪರಿಣಾಮವಾಗಿ ಅವರು ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಸೆಪ್ಟೆಂಬರ್ 14ರಂದು ಭಾರತ ವಿರುದ್ಧ ನಡೆದ ಏಷ್ಯಾಕಪ್ ಪಂದ್ಯದ ವೇಳೆ ಹಾರಿಸ್ ಪ್ರೇಕ್ಷಕರತ್ತ ತಿರುಗಿ “ವಿಮಾನ ಹೊಡೆದುರುಳಿಸಿದ್ದೇವೆ” ಎಂಬ ರೀತಿಯ ಸಂಜ್ಞೆ ಮಾಡಿ ಸಂಭ್ರಮಿಸಿದ್ದರು. ಇದೇ ರೀತಿಯ ವರ್ತನೆಯನ್ನು ಅವರು ಸೆಪ್ಟೆಂಬರ್ 28ರಂದು ನಡೆದ ಭಾರತ ವಿರುದ್ಧದ ಪಂದ್ಯದಲ್ಲಿಯೂ ಮರುಕಳಿಸಿದ್ದರು.

ಈ ಘಟನೆಯ ಬಗ್ಗೆ ಬಿಸಿಸಿಐ ಐಸಿಸಿ ಬಳಿ ದೂರು ಸಲ್ಲಿಸಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ರೌಫ್‌ಗೆ ನಾಲ್ಕು ಡಿಮೆರಿಟ್ ಪಾಯಿಂಟ್ ನೀಡಿದೆ. ಕಳೆದ ಒಂದು ವರ್ಷದಲ್ಲಿ ನಾಲ್ಕು ಪಾಯಿಂಟ್ ಸೇರುವ ಹಿನ್ನೆಲೆಯಲ್ಲಿ ಅವರಿಗೆ ಎರಡು ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ವಿಧಿಸಲಾಗಿದೆ.

ಹೀಗಾಗಿ ಇಂದು (ನ.6) ಫೈಸಲಾಬಾದ್‌ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೌಫ್ ಕಣಕ್ಕಿಳಿಯುವುದಿಲ್ಲ. ಅವರ ಬದಲಿಗೆ ಯುವ ವೇಗಿ ನಸೀಮ್ ಶಾ ಅವಕಾಶ ಪಡೆಯಲಿದ್ದಾರೆ.

error: Content is protected !!