ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಜೇಡನ್ ಸೀಲ್ಸ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಠಿಣ ಕ್ರಮ ಕೈಗೊಂಡಿದೆ. ಯಶಸ್ವಿ ಜೈಸ್ವಾಲ್ ವಿರುದ್ಧ ಆಕ್ರಮಣಕಾರಿ ನಡವಳಿಕೆ ತೋರಿದ್ದಕ್ಕಾಗಿ ಸೀಲ್ಸ್‌ಗೆ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಭಾರತದ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯದ ಸೀಲ್ಸ್, ತಮ್ಮ ಅಸಹನೀಯ ನಡವಳಿಕೆಯಿಂದ ವಿವಾದಕ್ಕೆ ಕಾರಣರಾದರು. ಮೊದಲ ದಿನದಂದು ಸೀಲ್ಸ್ 29ನೇ ಓವರ್ ಎಸೆದಾಗ, ಜೈಸ್ವಾಲ್ ಕ್ರೀಸ್‌ನಲ್ಲಿದ್ದರು. ಎಸೆತದ ನಂತರ ಸೀಲ್ಸ್ ತಮ್ಮ ಫಾಲೋ-ಥ್ರೂನಲ್ಲಿ ಚೆಂಡನ್ನು ಎತ್ತಿಕೊಂಡು ನೇರವಾಗಿ ಜೈಸ್ವಾಲ್ ಕಡೆಗೆ ಎಸೆದರು. ನಂತರ ಅವರು ರನ್ ಔಟ್ ಮಾಡಲು ಪ್ರಯತ್ನಿಸಿದ್ದೇನೆಂದು ಹೇಳಿಕೊಂಡರೂ, ಅಂಪೈರ್ ಹಾಗೂ ಮ್ಯಾಚ್ ರೆಫರಿ ಅವರ ಕ್ರಮವನ್ನು ಕ್ರೀಡಾಸ್ಫೂರ್ತಿಗೆ ವಿರುದ್ಧ ಎಂದು ಪರಿಗಣಿಸಿದರು.
ಐಸಿಸಿ ಶಿಸ್ತು ಸಮಿತಿಯು ಈ ಘಟನೆಯನ್ನು ನೀತಿ ಸಂಹಿತೆಯ ಆರ್ಟಿಕಲ್ 2.9 ಉಲ್ಲಂಘನೆ ಎಂದು ಗುರುತಿಸಿ, ದಂಡ ವಿಧಿಸಿದೆ. ಸೀಲ್ಸ್‌ಗೆ ನೀಡಲಾದ ಡಿಮೆರಿಟ್ ಪಾಯಿಂಟ್ ಇದು ಮೊದಲನೆಯದೇ ಅಲ್ಲ. 2024 ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ದಲ್ಲಿಯೂ ಇದೇ ರೀತಿಯ ವರ್ತನೆಗಾಗಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು.