ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದ ಖುಷಿಯಲ್ಲಿದ್ದ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಐಸಿಸಿ (ICC), ನಿಧಾನಗತಿಯ ಓವರ್ ದರ ನಿಯಮವನ್ನು ಉಲ್ಲಂಘಿಸಿರುವ ಟೀಂ ಇಂಡಿಯಾಕ್ಕೆ ಶಿಕ್ಷೆ ವಿಧಿಸಿದೆ.
ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಲೋ ಓವರ್ ರೇಟ್ ನಿಯಮವನ್ನು ಮುರಿದಿದ್ದು, ಈ ತಪ್ಪಿಗಾಗಿ ಐಸಿಸಿ ಶಿಕ್ಷೆ ವಿಧಿಸಿದೆ.
ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ ಬಾರಿಸಿಯೂ ಸೋತಿತ್ತು. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಸಮಯಕ್ಕೆ ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಪರಿಣಾಮವಾಗಿ, ಐಸಿಸಿ ಈಗ ಟೀಂ ಇಂಡಿಯಾಗೆ ದಂಡ ವಿಧಿಸಿದ್ದು, ಪಂದ್ಯ ಶುಲ್ಕದ ಶೇಕಡಾ 10 ರಷ್ಟು ಮೊತ್ತವನ್ನು ಕಡಿತಗೊಳಿಸಿದೆ.
ಟೀಂ ಇಂಡಿಯಾ ನಿಗದಿತ ಸಮಯಕ್ಕಿಂತ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದ ಕಾರಣ, ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಟೀಂ ಇಂಡಿಯಾಕ್ಕೆ ಈ ದಂಡ ವಿಧಿಸಿದ್ದಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಭಾರತೀಯ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಐಸಿಸಿ ನಿಯಮಗಳ ಪ್ರಕಾರ, ಆಟಗಾರನು ನಿಗದಿತ ಸಮಯದೊಳಗೆ ಬೌಲಿಂಗ್ ಮಾಡಲು ವಿಫಲವಾದರೆ, ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ನಾಯಕ ಕೆ.ಎಲ್. ರಾಹುಲ್ ಆರೋಪ ಮತ್ತು ದಂಡವನ್ನು ಒಪ್ಪಿಕೊಂಡಿರುವುದರಿಂದ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

