ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ವಿಶ್ವವೇ ಕಾತರದಿಂದ ಕಾಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಈ ಕುರಿತು ಸ್ಪಷ್ಟ ಚಿತ್ರಣ ಸಿಗಲು ಫೆಬ್ರವರಿ 15ರವರೆಗೆ ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟರೆ ನಾವು ಆಡುವುದಿಲ್ಲ ಎಂದು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ:
ಪಾಕ್ ತಂಡ ವಿಶ್ವಕಪ್‌ನಿಂದ ಹಿಂದೆ ಸರಿದರೆ, ಆ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಬ್ಯಾನ್ ಮಾಡಲಾಗುವುದು.
ಯಾವುದೇ ತಂಡಗಳೊಂದಿಗೆ ದ್ವಿಪಕ್ಷೀಯ ಸರಣಿ ಆಡಲು ಅವಕಾಶ ನೀಡುವುದಿಲ್ಲ.
ಪಾಕಿಸ್ತಾನ್ ಸೂಪರ್ ಲೀಗ್ ಆಡಲು ವಿದೇಶಿ ಆಟಗಾರರಿಗೆ NOC ನಿರಾಕರಿಸಲಾಗುವುದು.
ಐಸಿಸಿಯ ಕಠಿಣ ನಿಯಮಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿಯಲು ಸಾಧ್ಯವಾಗದ ಪಾಕಿಸ್ತಾನ, ಈಗ ಹೊಸ ಪ್ಲ್ಯಾನ್ ರೂಪಿಸಿದೆ. ಟೂರ್ನಿಯಲ್ಲಿ ಭಾಗವಹಿಸಿ, ಕೇವಲ ಭಾರತದ ವಿರುದ್ಧದ ಪಂದ್ಯವನ್ನು ಮಾತ್ರ ಬಹಿಷ್ಕರಿಸಲು (Boycott) ಪಿಸಿಬಿ ಚಿಂತನೆ ನಡೆಸುತ್ತಿದೆ. ಈ ಮೂಲಕ ಪಂದ್ಯದ ಪ್ರಸಾರ ಹಕ್ಕು ಮತ್ತು ಟಿಕೆಟ್ ಮಾರಾಟದಿಂದ ಬಿಸಿಸಿಐಗೆ ಆಗುವ ಬೃಹತ್ ಆದಾಯಕ್ಕೆ ಹೊಡೆತ ನೀಡುವ ಹುನ್ನಾರ ಇದರ ಹಿಂದಿದೆ.
ಈ ಕುರಿತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಅವರೊಂದಿಗೆ ಚರ್ಚಿಸಿದ್ದು, ಸರ್ಕಾರದಿಂದ “ಯಾವುದೇ ಕಠಿಣ ನಿರ್ಧಾರಕ್ಕೂ ಸಿದ್ಧರಾಗಿ” ಎಂಬ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿದೆ.
ಈ ಹಗ್ಗಜಗ್ಗಾಟದ ಅಂತಿಮ ಫಲಿತಾಂಶ ಫೆಬ್ರವರಿ 15ರ ಸಭೆಯಲ್ಲಿ ನಿರ್ಧಾರವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.



