Wednesday, October 15, 2025

ICC T20 Ranking: ಅಭಿಷೇಕ್ ಶರ್ಮಾ ಟಾಪ್ ಬ್ಯಾಟ್ಸ್ ಮ್ಯಾನ್, ಪಾಂಡ್ಯ ನಂ.1 ಆಲ್‌ರೌಂಡರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡದ ಅಭಿಷೇಕ್ ಶರ್ಮಾ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ ಇದುವರೆಗೆ ಆಡಿರುವ ನಾಲ್ಕು ಇನಿಂಗ್ಸ್‌ಗಳಲ್ಲಿ 43.25ರ ಸರಾಸರಿಯಲ್ಲಿ 173 ರನ್‌ಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇದರ ನಡುವೆ ತಿಲಕ್ ವರ್ಮಾ ಕೂಡ 791 ಅಂಕಗಳೊಂದಿಗೆ ಒಂದು ಸ್ಥಾನ ಜಿಗಿದು ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ತಿಲಕ್ ವರ್ಮಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಇದುವರೆಗೂ ಆಡಿದ ಮೂರು ಇನಿಂಗ್ಸ್‌ಗಳಲ್ಲಿ 90 ರನ್ ಕಲೆ ಹಾಕಿದ್ದು, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.

ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಕೂಡ ಒಂದು ಸ್ಥಾನ ಬಡ್ತಿ ಪಡೆದು 729 ರೇಟಿಂಗ್ಸ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಇನ್ನು ಬೌಲಿಂಗ್ ಶ್ರೇಯಾಂಕದಲ್ಲಿ, ಅಬ್ರಾರ್ ಅಹ್ಮದ್ 12 ಸ್ಥಾನಗಳ ಏರಿಕೆ ಕಂಡು 703 ರೇಟಿಂಗ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಯುಎಇ ವಿರುದ್ಧದ ಪಂದ್ಯದಲ್ಲಿ 13 ರನ್ ನೀಡಿ 2 ವಿಕೆಟ್‌ ಸೇರಿ ಇಲ್ಲಿಯವರೆಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ನಂ.1 ಆಲ್‌ರೌಂಡರ್‌
ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಕ್ಷರ್ ಪಟೇಲ್ ಒಂದು ಸ್ಥಾನ ಏರಿಕೆಯಾಗಿ 168 ರೇಟಿಂಗ್‌ಗಳೊಂದಿಗೆ 11ನೇ ಸ್ಥಾನಕ್ಕೆ ಏರಿದ್ದಾರೆ. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 238 ರೇಟಿಂಗ್‌ಗಳೊಂದಿಗೆ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಐಸಿಸಿ ಟಿ20ಐ ಶ್ರೇಯಾಂಕದಲ್ಲಿ 900 ಅಂಕ ದಾಟಿದವರು
ಭಾರತದ ಪರ ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಸೂರ್ಯಕುಮಾರ್ ಯಾದವ್ 912 ಪಾಯಿಂಟ್ಸ್‌ ಹೊಂದುವ ಮೂಲಕ ಅತೀ ಹೆಚ್ಚು ಅಂಕ ಪಡೆದ ಖ್ಯಾತಿಯನ್ನು ಹೊಂದಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಕೂಡ 909 ರೇಟಿಂಗ್ ಪಾಯಿಂಟ್ ಹೊಂದಿದ್ದರು. ಇದೀಗ ಅಭಿಷೇಕ್ 907 ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ.

error: Content is protected !!