ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಭಾನುವಾರ ಬೆಳಕಿಗೆ ಬಂದಿದ್ದು, ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಗೋಣಿಚೀಲದಲ್ಲಿ ತುಂಬಿ, ಕಾರಿನಲ್ಲಿಟ್ಟು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
ಲಾತೂರ್ ಜಿಲ್ಲೆಯ ಔಸಾ ತಾಂಡಾ ನಿವಾಸಿ ಗಣೇಶ್ ಚವಾಣ್ ಮೃತ ದುರ್ದೈವಿ. ಇವರು ಬ್ಯಾಂಕ್ ಒಂದರಲ್ಲಿ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಚವಾಣ್ ಅವರನ್ನು ಗೋಣಿಚೀಲದಲ್ಲಿ ಬಿಗಿಯಾಗಿ ತುಂಬಿ ಹಗ್ಗದಿಂದ ಕಟ್ಟಲಾಗಿತ್ತು. ಬಳಿಕ ಆ ಚೀಲವನ್ನು ಅವರದೇ ಕಾರಿನೊಳಗೆ ಇರಿಸಿ, ದುಷ್ಕರ್ಮಿಗಳು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ನೀಡಿದ್ದು, “ಮಧ್ಯರಾತ್ರಿ 12.30 ರ ಸುಮಾರಿಗೆ 112 ಸಹಾಯವಾಣಿಗೆ ಕರೆ ಬಂದಿತ್ತು. ವನವಾಡ ರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿಯುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದರು. ನಮ್ಮ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು,” ಎಂದಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ಬಳಿಕ, ಕಾರಿನೊಳಗೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಮಾನವ ದೇಹ ಪತ್ತೆಯಾಗಿದೆ. ಪೊಲೀಸರು ತಕ್ಷಣ ವೈದ್ಯಕೀಯ ಅಧಿಕಾರಿಗಳನ್ನು ಕರೆಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಭಾನುವಾರದಿಂದ ಚವಾಣ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಅವರ ಆಪ್ತರಿಗೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಅವರನ್ನು ಹುಡುಕುತ್ತಿದ್ದಾಗ ಈ ಭೀಕರ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ.
ಪೊಲೀಸರು ಅಪರಾಧ ಸ್ಥಳದಲ್ಲಿ ಪ್ರಾಥಮಿಕ ತನಿಖೆ ನಡೆಸಿ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಮತ್ತು ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ. ಇದು ಕೃತ್ಯವು ವೈಯಕ್ತಿಕ ದ್ವೇಷವೇ ಅಥವಾ ವೃತ್ತಿ ಸಂಬಂಧಿತ ಕಾರಣಗಳಿಂದಾಗಿಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

