ದಕ್ಷಿಣ ಭಾರತೀಯರ ಬೆಳಗಿನ ಉಪಹಾರದಲ್ಲಿ ಇಡ್ಲಿ ಅಥವಾ ದೋಸೆ ಅನಿವಾರ್ಯ. ಆದರೆ ಮಧುಮೇಹಿಗಳ ವಿಷಯ ಬಂದಾಗ ಈ ಆಹಾರಗಳ ಆಯ್ಕೆ ಮಹತ್ವದ ವಿಷಯವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯವಾಗಿ ಇಡ್ಲಿ ಮತ್ತು ದೋಸೆ ಎರಡೂ ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ತಯಾರಾಗುವ ಕಾರಣದಿಂದ ಇವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚು ಇರುತ್ತದೆ. ಆದ್ದರಿಂದ ಯಾವುದು ಉತ್ತಮ ಎನ್ನುವುದು ಅದರ ತಯಾರಿ ವಿಧಾನ ಮತ್ತು ಸೇವನೆ ಪ್ರಮಾಣದ ಮೇಲೆ ಅವಲಂಬಿತವಾಗಿದೆ.
ಇಡ್ಲಿಯ ಪ್ರಯೋಜನಗಳು:
ಇಡ್ಲಿಯನ್ನು ತಯಾರಿಸಲು ಎಣ್ಣೆ ಬಳಸುವುದಿಲ್ಲ. ಇದು ಹಗುರವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಬಿಳಿ ಅಕ್ಕಿಯ ಇಡ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸಬಹುದು. ಇದರ ಬದಲಿಗೆ ರಾಗಿ, ಹೆಸರು ಬೇಳೆ ಅಥವಾ ಇತರ ದ್ವಿದಳ ಧಾನ್ಯಗಳಿಂದ ಮಾಡಿದ ಇಡ್ಲಿ ಮಧುಮೇಹಿಗಳಿಗೆ ಉತ್ತಮ ಆಯ್ಕೆ. ಇದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ.

ದೋಸೆಯ ಬಗ್ಗೆ:
ದೋಸೆ ರುಚಿಕರವಾದರೂ ಅದರಲ್ಲಿ ಎಣ್ಣೆ, ತುಪ್ಪ ಅಥವಾ ಮಸಾಲೆ ಬಳಸುವ ಪ್ರಮಾಣ ಹೆಚ್ಚಾದರೆ ಕ್ಯಾಲೋರಿಗಳು ಏರುತ್ತವೆ. ಅಕ್ಕಿ ಪ್ರಮಾಣ ಹೆಚ್ಚಿರುವುದರಿಂದ ಇದು ಗ್ಲೈಸೆಮಿಕ್ ಸೂಚ್ಯಂಕ (GI) ಹೆಚ್ಚು ಹೊಂದಿದೆ. ಮಧುಮೇಹಿಗಳು ದೋಸೆಯನ್ನು ಸಣ್ಣ ಪ್ರಮಾಣದಲ್ಲಿ, ಕಡಿಮೆ ಎಣ್ಣೆಯೊಂದಿಗೆ ತಿಂದರೆ ಮಾತ್ರ ಇದು ಸುರಕ್ಷಿತ.

ಆಹಾರದಲ್ಲಿನ ಸಮತೋಲನ ಮುಖ್ಯ:
ಮಧುಮೇಹಿಗಳು ಉಪಾಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್‌ಗಳನ್ನು ಸೇರಿಸಿಕೊಳ್ಳಬೇಕು. ಉದಾಹರಣೆಗೆ, ಇಡ್ಲಿ ಅಥವಾ ದೋಸೆಯ ಜೊತೆಗೆ ಸಾಂಬಾರ್ ಮತ್ತು ತರಕಾರಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆಯ ಏರಿಕೆ ನಿಧಾನಗತಿಯಾಗುತ್ತದೆ.

ತಜ್ಞರು ಪ್ರಕಾರ ಇಡ್ಲಿ ಮತ್ತು ದೋಸೆಯನ್ನು ತಿನ್ನಬಹುದು. ಅವುಗಳನ್ನು ಸಣ್ಣ ಪ್ರಮಾಣದಲ್ಲಿ ತಿನ್ನಬೇಕು. ಜೊತೆಗೆ ಹೆಚ್ಚು ಫೈಬರ್ ಹಾಗು ಪ್ರೊಟೀನ್ ಅಂಶಗಳನ್ನು ಸೇರಿಸಿಕೊಂಡು ಮಿತ ಪ್ರಮಾದಲ್ಲಿ ಸೇವಿಸಬಹುದು. ಇವೆರಡರಲ್ಲಿ ಇಡ್ಲಿಯು ದೋಸೆಗಿಂತ ಉತ್ತಮ ಆಯ್ಕೆಯಾಗಿದೆ ಎನ್ನುತ್ತಾರೆ ತಜ್ಞರು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)