ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಮತಾ ಸರಕಾರದಲ್ಲಿ ಸುರಕ್ಷಿತವಾಗಿರುವ ಗೂಂಡಾಗಳಿಗೆ ತಕ್ಕ ಶಿಕ್ಷೆ ನೀಡಿ ಪ್ರತಿಯೊಬ್ಬರ ಲೆಕ್ಕವನ್ನು ತೀರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಬಂಕುರ ಜಿಲ್ಲೆಯ ಒಂಡಾದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ದೀದಿ ಸರಕಾರದಲ್ಲಿ ಕೊಲೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದ್ದು, ಗೂಂಡಾಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಆದರೆ, ಬಿಜೆಪಿ ಸರ್ಕಾರ ರಚಿಸಿದ ಬಳಿಕ ಪ್ರತಿಯೊಬ್ಬ ಗೂಂಡಾಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಜೊತೆಗೆ ಬಂಗಾಳದಲ್ಲಿ ಮಹಿಳೆಯರಿಗೆ 24/7 ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಗೂಂಡಾಗಳಿಗೆ ಎಚ್ಚರಿಕೆ ನೀಡಿದ ಶಾ, ಜನರ ಮೇಲೆ ದೌರ್ಜನ್ಯ ನಡೆಸಲು ಚುನಾವಣೆಯ ದಿನದಂದು ಮನೆಯಿಂದ ಹೊರ ಬರಬೇಡಿ. ಚುನಾವಣೆಯ ಸಮಯದಲ್ಲಿ ಯಾವುದೇ ಟಿಎಂಸಿ ಗೂಂಡಾಗಳು ದುಷ್ಕೃತ್ಯ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೀದಿ ಸರಕಾರದ ದುರಹಂಕಾರದಿಂದಾಗಿ ರೈತರು ಬೆಳೆಸಿದ ಆಲೂಗಡ್ಡೆಯನ್ನು ಜಾರ್ಖಂಡ್, ಬಿಹಾರ ಅಥವಾ ಒಡಿಶಾಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ವರ್ಷ ಬಂಪರ್ ಬೆಳೆಯಿಂದಾಗಿ ಬೆಲೆ ಕುಸಿತದ ಬಿಕ್ಕಟ್ಟನ್ನು ರೈತರು ಎದುರಿಸುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಆಲೂಗಡ್ಡೆ ಬೆಳೆಯುವ ರೈತರಿಗೆ ಅವರ ಉತ್ಪನ್ನಗಳಿಗೆ ದೇಶಾದ್ಯಂತ ಮಾರುಕಟ್ಟೆಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.



