ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದ್ವೇಷದ ರಾಜಕಾರಣ ತಾಂಡವವಾಡುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯ ಹಾಗೂ ರಾಜ್ಯದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇವಲ ಬಳ್ಳಾರಿಯಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಜನತೆಗೆ ರಕ್ಷಣೆ ನೀಡಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಳ್ಳಾರಿಯ ಇತ್ತೀಚಿನ ಗುಂಡಿನ ಚಕಮಕಿ ಹಾಗೂ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಘಟನೆಗಳ ಬಗ್ಗೆ ಮಾತನಾಡಿದ ಕಾರಜೋಳ, “ಆ ಘಟನೆಯಲ್ಲಿ ಗುಂಡು ಹಾರಿಸಿದವರು ಗನ್‌ಮ್ಯಾನ್‌ಗಳಲ್ಲ, ನನ್ನ ದೃಷ್ಟಿಯಲ್ಲಿ ಅವರು ಸುಪಾರಿ ಕಿಲ್ಲರ್‌ಗಳು. ಶಾಸಕ ಭರತ್ ರೆಡ್ಡಿ ಅವರ ಗೂಂಡಾಗಿರಿ ಸಮಾಜಕ್ಕೆ ಒಳ್ಳೆಯದಲ್ಲ. ಜನಪ್ರತಿನಿಧಿಗಳು ಸಂತರು ಮತ್ತು ಶರಣರಂತೆ ಜನಸೇವೆ ಮಾಡಬೇಕೇ ಹೊರತು, ಚಂಬಲ್ ಕಣಿವೆಯ ಡಕಾಯಿತರಂತೆ ವರ್ತಿಸಬಾರದು” ಎಂದು ಕಿಡಿಕಾರಿದರು. ಕೂಡಲೇ ಭರತ್ ರೆಡ್ಡಿ ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.
ಅಬಕಾರಿ ಇಲಾಖೆಯ ಲಂಚಾವತಾರ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಡೆಪ್ಯೂಟಿ ಕಮಿಷನರ್ ಒಬ್ಬರು ಮಂತ್ರಿಗೆ ಒಂದೂವರೆ ಕೋಟಿ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಅಧಿಕಾರಿಗಳೇ ಸಚಿವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ಮಂತ್ರಿಗಿರಿಗೆ ರಾಜೀನಾಮೆ ನೀಡಬೇಕು” ಎಂದು ಸವಾಲು ಹಾಕಿದರು.



