March 12, 2026
Thursday, March 12, 2026
spot_img

ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು: ಸಂಸದ ಯದುವೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ- ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ, ದೇಶಾಭಿಮಾನ ಮೂಡಿಸುವ ಕೆಲಸ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ಭಾನುವಾರ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು ಇದ್ದಂತೆ. ಕರಾವಳಿಯಲ್ಲಿ ರಾಜ್ಯದ ಪರಂಪರೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡಿದರೆ ಅದು ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ್ದರೂ ಇಂದಿಗೂ ಅನೇಕ ಕಡೆಗಳಲ್ಲಿ ಶಿಕ್ಷಣ ಕ್ಷೇತ್ರ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರ ಕ್ರೀಡೆಗೆ ಸರ್ವ ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವುದರೊಂದಿಗೆ ವಿಶ್ವ ಮಟ್ಟದಲ್ಲಿ ಭಾರತ ಇನ್ನಷ್ಟು ಮುಂದುವರಿಯಬೇಕಿದೆ. ನಮ್ಮ ದೇಶದಲ್ಲಿ ಕಾಮನ್‌ವೆಲ್ತ್‌ ಕ್ರೀಡೆ ಆಯೋಜನೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಮುಂದೆ ಒಲಂಪಿಕ್‌ ಕ್ರೀಡಾಕೂಟವನ್ನು ಭಾರತದಲ್ಲೇ ನಡೆಸುವ ಸುಯೋಗ ಒದಗಿಬರಲಿ ಎಂದು ಆಶಿಸಿದರು.

ಪ್ರಸ್ತುತ ಆರೋಗ್ಯ ಸಮಸ್ಯೆಗಳಿಗೆ ವ್ಯಾಯಾಮ ರಹಿತ ಜೀವನ ಶೈಲಿಯೇ ಮುಖ್ಯ ಕಾರಣ. ಎಳೆ ವಯಸ್ಸಿನಲ್ಲೇ ಕ್ರೀಡೆಯತ್ತ ಮಕ್ಕಳ ಮನಸ್ಸನ್ನು ಸೆಳೆದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎಂದು ಯದುವೀರ್ ಕರೆ ನೀಡಿದರು.

ಇದೇ ಸಂದರ್ಭ ಶಾರದಾ ಸಮೂಹ ಸಂಸ್ಥೆ ವತಿಯಿಂದ ಯದುವೀರ್‌ ಅವರಿಗೆ ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರಚಿಸಿದ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !