ಹೊಸದಿಗಂತ ಡಿಜಿಟಲ್ ಡೆಸ್ಕ್:
ಎತ್ತಿನ ಹೊಳೆ ಯೋಜನೆಯ ಸುಮಾರು 252 ಕಿಲೋಮೀಟರ್ ನಾಲಾ ಕಾಮಗಾರಿಯಲ್ಲಿ 235 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಆನಂದ ತಿಳಿಸಿದ್ದಾರೆ.
ತುಮಕೂರಿನಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿಲೋಮೀಟರ್ ಅರಣ್ಯ ಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ 2026ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಹೇಳಿದ್ದಾರೆ.
ಎತ್ತಿನಹೊಳೆಗೆ ಯೋಜನೆಯಿಂದ ಒಟ್ಟು 24.78 ಟಿ.ಎಂ.ಸಿ ನೀರು ಹಾಸನ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನಿಗದಿಪಡಿಸಿದಂತೆ ಹರಿಸಲು ಎಲ್ಲಾ ರೀತಿಯ ಯೋಜನೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ 06-09-2024ರಲ್ಲಿ ಒಂದು ಹಂತದಲ್ಲಿ ನೀರನ್ನು ಲಿಫ್ಟ್ ಮಾಡಿ, ವಾಣಿವಿಲಾಸ ಡ್ಯಾಂ ತುಂಬಿಸಲಾಗಿದೆ. ಕೇಂದ್ರ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಆರು ಕಿಲೋಮೀಟರ್ ಅರಣ್ಯ ಭೂಮಿಯಲ್ಲಿ ನಾಲೆ ಮಾಡಲು ಅನುಮೋದನೆ ದೊರೆತರೆ ನಿಗದಿಯಂತೆ ನೀರು ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

