Monday, September 1, 2025

ಜನರಲ್ಲಿ ಶಾಂತಿ ನೆಲೆಸಬೇಕೆಂದರೆ ಉಗ್ರವಾದ ಕೊನೆಯಾಗಲಿ: SCO ಶೃಂಗಸಭೆಯಲ್ಲಿ ಮೋದಿ ಖಡಕ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್.ಇ.ಒ) ಸಭೆಯಲ್ಲಿ ಭಾರತ ಮತ್ತು ರಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು,ಈ ವೇಳೆ ಪ್ರಧಾನಿ ಮೋದಿ ಭಾರತವು ಉಗ್ರವಾದದ ವಿರುದ್ಧ ತಾನು ನಡೆಸುತ್ತಿರುವ ಹೋರಾಟಕ್ಕೆ ರಷ್ಯಾ ಸೇರಿದಂತೆ ಶಾಂಘೈ ಸಹಕಾರ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಸಹಕಾರವನ್ನು ಕೋರಿದ್ದಾರೆ. ಜೊತೆಗೆ, ಶಾಂಘೈ ಸಂಘದ ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಸಂಪರ್ಕ, ಸಂವಹನ ಮಾರ್ಗಗಳು ಸೃಷ್ಟಿಯಾಗಬೇಕು ಎಂದು ಹೇಳಿದ್ದಾರೆ.

ಉಗ್ರವಾದವನ್ನು ಮಟ್ಟ ಹಾಕಬೇಕು
ಯಾವುದೇ ಒಂದು ರಾಷ್ಟ್ರದ ಶಾಂತಿಗೆ ಭಂಗ ತರುವ ಕೆಲಸವೇ ಉಗ್ರವಾದ. ನಮ್ಮ ದೇಶದ ಜನರಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದರೆ ನಾವು ಉಗ್ರವಾದವನ್ನು ಮಟ್ಟ ಹಾಕಬೇಕು. ಭಾರತವು, ಕಳೆದ 70 ದಶಗಳಲ್ಲಿ ಈ ಉಗ್ರವಾದದ ವಿರುದ್ಧ ಹೋರಾಡುತ್ತಲೇ ಇದೆ. ಜಗತ್ತಿನ ಹಲವಾರು ರಾಷ್ಟ್ರಗಳು ಉಗ್ರವಾದವನ್ನು ಖಂಡಿಸುತ್ತವೆ. ಆದರೆ, ಕೆಲವು ರಾಷ್ಟ್ರಗಳು ಖಂಡಿಸುವುದರ ಜೊತೆಗೆ ಉಗ್ರವಾದ ನಡೆಸುವ ರಾಷ್ಟ್ರಗಳಿಗೆ ಸಹಾಯ ಮಾಡುತ್ತೇವೆ. ಬದಲಾದ ಕಾಲಘಟ್ಟದಲ್ಲಿ ಏಷ್ಯಾ ಖಂಡದ ಶಕ್ತಿಗಳಾಗಿರುವ ನಾವೆಲ್ಲರೂ ಒಂದೇ ಮನಸ್ಸಿನಿಂದ ಉಗ್ರವಾದವನ್ನು ಖಂಡಿಸಬೇಕು ಎಂದು ಮೋದಿ ಆಗ್ರಹಿಸಿದ್ದಾರೆ.

ಸಂಪರ್ಕ ಮತ್ತು ಸಾರ್ವಭೌಮತ್ವ
ಶಾಂಘೈ ಸಹಕಾರ ಸಂಘದ (ಎಸ್ ಸಿಒ) ಉದ್ದೇಶಗಳಲ್ಲಿ, ಏಷ್ಯಾದ ಸದಸ್ಯ ರಾಷ್ಟ್ರಗಳ ನಡುವೆ ಗಡಿ ರೇಖೆಗಳು ಮುಕ್ತವಾಗಿರಬೇಕು, ಆ ಮೂಲಕ, ದೇಶ – ದೇಶಗಳ ನಡುವೆ ಸುಲಭ ಸಂಪರ್ಕಕ್ಕೆ ಅನುಕೂಲವಾಗಬೇಕು ಎಂಬ ವಿಚಾರವಿದೆ. ಇದನ್ನು ಅರ್ಥ ಮಾಡಿಕೊಂಡು ಗಡಿಗಳನ್ನು ಮುಕ್ತಗೊಳಿಸುವಿಕೆ, ಏಷ್ಯಾದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭವಾಗಿ ಸಾರಿಗೆ ಮತ್ತಿತರ ಸಂಪರ್ಕ ಮಾರ್ಗಗಳು ಸೃಷ್ಟಿಯಾಗಬೇಕು. ಅದರಿಂದ ಸರಕು ಸಾಗಣೆ, ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ.

ಭಾರತ ಮತ್ತು ಎಸ್.ಇ.ಒ ಅಧ್ಯಕ್ಷಗಿರಿ
2023ರಲ್ಲಿ ಶಾಂಘೈ ಸಹಕಾರ ಸಂಘದ ಅಧ್ಯಕ್ಷನಾಗಿದ್ದಾಗ ಭಾರತ, ನವ ಶಕ್ತಿಯ ಸಾಧ್ಯತೆಗಳ ಬಗ್ಗೆ ಪ್ರಸ್ತಾಪಿಸಿದ್ದೆವು. ಯುವಜನರ ಸಬಲೀಕರಣ, ಡಿಜಿಟಲ್ ಕ್ರಾಂತಿಯಲ್ಲಿ ಯುವಕರನ್ನು, ದೇಶವಾಸಿಗಳನ್ನು ಒಗ್ಗೂಡಿಸಿಕೊಳ್ಳುವುದು, ಭಾರತ ಹಾಗೂ ಏಷ್ಯಾದ ಇತರ ರಾಷ್ಟ್ರಗಳಲ್ಲಿರುವ ಬುದ್ಧನ ಶಾಂತಿ ನೆಲೆಗಳನ್ನು ಅಭಿವೃದ್ಧಿಗೊಳಿಸುವುದು ಇತ್ಯಾದಿ ಯೋಜನೆಗಳನ್ನು ಪ್ರಸ್ತಾಪಿಸಲಾಗಿತ್ತು. ಅವುಗಳಲ್ಲಿ ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಚುರುಕಾಗಿ ನಡೆಯಬೇಕಿದೆ ಎಂದು ಮೋದಿಯವರು ಪುಟಿನ್ ಅವರಲ್ಲಿ ಮನವಿ ಮಾಡಿದ್ದಾರೆ.

ನಾಗರಿಕ ಸಂವಾದ ವೇದಿಕೆ
ಶಾಂಘೈ ಸಂಘದ ಸದಸ್ಯ ರಾಷ್ಟ್ರಗಳ ನಡುವೆ ನಾಗರಿಕ ಸಂವಹನ ವೇದಿಕೆಯೊಂದು ಸೃಷ್ಟಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಪುಟಿನ್ ಅವರಲ್ಲಿ ಬೇಡಿಕೆಯಿಟ್ಟಿದ್ದಾರೆ.

ಉಕ್ರೇನ್ ನಲ್ಲಿ ಶಾಂತಿ
ಮೂರ್ನಾಲ್ಕು ವರ್ಷಗಳಿಂದ ಉಕ್ರೇನ್ ನಲ್ಲಿ ಅಶಾಂತಿ ಏರ್ಪಟ್ಟಿದೆ. ಹಾಗಾಗಿ, ಉಕ್ರೇನ್ ನಲ್ಲಿ ಸಮರ ನಿಲ್ಲಬೇಕು. ರಷ್ಯಾ ದೇಶವು ಅಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಬೇಕು. ಉಕ್ರೇನ್ ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮೊದಲ ಆದ್ಯತೆ ನೀಡಬೇಕು ಎಂದು ಅವರು ಪುಟಿನ್ ಅವರನ್ನು ಕೋರಿದ್ದಾರೆ.

ಇದನ್ನೂ ಓದಿ