ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿಕೂಟದ ನಾಯಕರನ್ನು ‘ಭ್ರಷ್ಟಾಚಾರದ ಯುವರಾಜರು’ ಎಂದು ಟೀಕಿಸಿದ ಅವರು, ಈ ಎರಡೂ ಪಕ್ಷಗಳು ‘ನೀರು ಮತ್ತು ಎಣ್ಣೆ’ಯಂತೆ ಎಂದು ಲೇವಡಿ ಮಾಡಿದರು.
‘ನೀರು ಮತ್ತು ಎಣ್ಣೆಯಂತಹ’ ಮೈತ್ರಿ
ಪ್ರಧಾನಿ ಮೋದಿ ಅವರು, “ಮಹಾಘಟಬಂಧನ್ ಮೈತ್ರಿದಾರರ ನಡುವೆ ಆಳವಾದ ಆಂತರಿಕ ಬಿರುಕುಗಳಿವೆ. ಅಧಿಕಾರದ ದುರಾಸೆಯಿಂದ ಎರಡೂ ಪಕ್ಷಗಳು ಒಗ್ಗಟ್ಟಾಗಿರುವಂತೆ ನಾಟಕವಾಡುತ್ತಿವೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ನೀರು ಮತ್ತು ಎಣ್ಣೆಯಂತೆ” ಎಂದು ಟೀಕಿಸಿದರು.
ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿಕೊಂಡ ಪ್ರಧಾನಿ, ಅವರಿಬ್ಬರನ್ನು ‘ಭ್ರಷ್ಟಾಚಾರದ ಯುವರಾಜರು’ ಎಂದು ಕರೆದರು. ಬಿಹಾರವನ್ನು ಲೂಟಿ ಮಾಡಲು ಅಧಿಕಾರ ಹಿಡಿಯಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ ಎಂದು ಅವರು ನೇರ ಆರೋಪ ಮಾಡಿದರು.
“ಬಿಹಾರದ ಚುನಾವಣಾ ಯುದ್ಧದಲ್ಲಿ ತಮ್ಮನ್ನು ತಾವೇ ‘ಯುವರಾಜರು’ ಎಂದು ಪರಿಗಣಿಸುವ ಯುವರಾಜರ ಜೋಡಿಯೊಂದು ಸುಳ್ಳು ಭರವಸೆಗಳ ಅಂಗಡಿಗಳನ್ನು ತೆರೆದಿದ್ದಾರೆ. ಒಬ್ಬರು ಭಾರತದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜನಾದರೆ ಇನ್ನೊಬ್ಬರು ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ. ಈ ಇಬ್ಬರೂ ಕೂಡಾ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ,” ಎಂದು ಪ್ರಧಾನಿ ಮೋದಿ ಹೇಳಿದರು.
“ಈ ಇಬ್ಬರೂ ನಿರಂತರವಾಗಿ ನನ್ನ ವಿರುದ್ಧ ನಿಂದನೆಗಳನ್ನು ಮಾಡುತ್ತಿದ್ದಾರೆ. ಆದರೆ ಇಂಥವರಿಂದ ನಾವು ಇನ್ನೇನು ನಿರೀಕ್ಷಿಸಬಹುದು? ನನ್ನ ಹೆಸರು ಜಪಿಸದಿದ್ದರೆ ಅವರಿಗೆ ಊಟ ಜೀರ್ಣವಾಗುವುದಿಲ್ಲ” ಎಂದು ಮೋದಿ ಲೇವಡಿ ಮಾಡಿದ್ದಾರೆ.

