ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ವಿರುದ್ಧ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ದೊಡ್ಡ ಕ್ರಮ ಜರುಗಿದೆ. 127 ಕೆಜಿ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿದ ಆರೋಪ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ನಟಿಗೆ 102 ಕೋಟಿ ರೂ. ದಂಡ ವಿಧಿಸಿದೆ.
ಡಿಆರ್‌ಐ ನಡೆಸಿದ ದೀರ್ಘ ತನಿಖೆಯಲ್ಲಿ ರನ್ಯಾ ರಾವ್ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಬಹಿರಂಗವಾಗಿದೆ. 1 ವರ್ಷದಲ್ಲಿ ಸುಮಾರು 127 ಕೆಜಿ ಚಿನ್ನವನ್ನು ಬೆಂಗಳೂರಿಗೆ ತರಲಾಗಿದ್ದು, ಇದರ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳು ಅಧಿಕಾರಿಗಳ ಕೈಗೆ ಸಿಕ್ಕಿವೆ. ಇದರ ಆಧಾರದ ಮೇಲೆ ನಟಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ದಂಡ ಸಹಿತ 102 ಕೋಟಿ ರೂ.ಗಳನ್ನು ಪಾವತಿಸುವಂತೆ ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ನಟಿಯೊಂದಿಗೆ ಇನ್ನೂ ನಾಲ್ವರು ಆರೋಪಿಗಳಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ಇದೇ ವೇಳೆ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಈಗಾಗಲೇ 37 ಕೋಟಿಯಷ್ಟು ಆಸ್ತಿಯನ್ನು ಜಪ್ತ ಮಾಡಿದೆ. ಇದರಿಂದ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ರನ್ಯಾ ರಾವ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.
ಸದ್ಯ ನಟಿ ಕಾಫಿಪೋಸಾ ಕಾಯ್ದೆಯ ಅಡಿಯಲ್ಲಿ ಬಂಧಿತರಾಗಿದ್ದು, ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದೆ. ಚಿನ್ನ ಅಕ್ರಮ ಸಾಗಾಟದ ಜಾಲ ಹಾಗೂ ಅದರ ಹಿನ್ನಲೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.