ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಮಿನಲ್ ಕೇಸ್ ಗಳಲ್ಲಿ ಸತತ ಮೂವತ್ತು ದಿನಗಳವರೆಗೆ ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿಗಳು ಅಥವಾ ಕೇಂದ್ರ, ರಾಜ್ಯಗಳ ಸಚಿವರನ್ನು ಅವರ ಸಾಂವಿಧಾನಿಕ ಸ್ಥಾನದಿಂದ ಪದಚ್ಯುತಿಗೊಳಿಸುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಇದನ್ನು ಸಹಜವಾಗಿ ಕಾಂಗ್ರೆಸ್ ಹಾಗೂ ವಿಪಕ್ಷಗಳು ವಿರೋಧಿಸಿವೆ. ಆದರೆ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಈ ವಿಚಾರದಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಈ ವಿಧೇಯಕ ಅತ್ಯಂತ ಔಚಿತ್ಯವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಕಣ್ಣು ಕೆಂಪಗಾಗಿಸಿದ್ದಾರೆ.
‘ನಾನು ಆ ವಿಧೇಯಕದ ಕರಡು ಪ್ರತಿಯನ್ನು ನೋಡಿಲ್ಲ. ಆದರೆ, ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಓದಿದ್ದೇನೆ. ವಿಧೇಯಕದ ಹಿಂದಿನ ಉದ್ದೇಶ ಅರ್ಥವಾಗಿದೆ. ಅದನ್ನು ಪರಿಗಣಿಸಿ ಹೇಳುವುದಾದರೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಜನಪ್ರತಿನಿಧಿಗಳ ಸ್ಥಾನದಲ್ಲಿದ್ದು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ಜನರೂ ಅದನ್ನು ನಿರೀಕ್ಷಿಸುತ್ತಾರೆ. ಆ ಹಿನ್ನೆಲೆಯಲ್ಲಿ, ಇಂಥ ವಿಧೇಯಕಗಳನ್ನು ನಾವು ಸ್ವಾಗತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ವಿಧೇಯಕದಲ್ಲಿ ಏನಾದರೂ ತಿದ್ದುಪಡಿ ತರಬೇಕು ಎಂದು ಲೋಕಸಭೆಯಲ್ಲಿ ಆಗ್ರಹಗಳು ಕೇಳಿಬಂದರೆ ಈ ವಿಧೇಯಕವನ್ನು ಲೋಕಸಭೆಯ ಸ್ಥಾಯಿ ಸಮಿತಿಗೆ ವರ್ಗಾಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.