Saturday, December 13, 2025

ಎಲಾನ್ ಮಸ್ಕ್‌ಗೆ ಪತ್ರ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ: ಎಕ್ಸ್‌ ಮಾಲಿಕನಲ್ಲಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಕ್ಸ್ ಮಾಲೀಕ ಎಲಾನ್ ಮಸ್ಕ್ ಅವರ ಬಳಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಸಾರ್ವಜನಿಕವಾಗಿ ಮನವಿಯೊಂದು ಮಾಡಿಕೊಂಡಿದ್ದಾರೆ.

ಇಮ್ರಾನ್ ಖಾನ್ ಅವರ ಪರಿಸ್ಥಿತಿಗೆ ಸಂಬಂಧಿಸಿದ ತಮ್ಮ ಪೋಸ್ಟ್‌ಗಳನ್ನು ಎಕ್ಸ್‌ನಲ್ಲಿ ಡಿಲೀಟ್ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನಿ ಅಧಿಕಾರಿಗಳು ಇಮ್ರಾನ್ ಖಾನ್ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಎದುರಿಸುತ್ತಿರುವ ಕಾನೂನು ಸಂಕಷ್ಟಗಳ ಬಗ್ಗೆ ತಾನು ನೀಡುವ ಮಾಹಿತಿಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲ ಎಂದು ಗೋಲ್ಡ್‌ಸ್ಮಿತ್ ಹೇಳಿದ್ದಾರೆ. ತನ್ನ ಪೋಸ್ಟ್‌ಗಳನ್ನು ತೆಗೆದುಹಾಕಲಾಗುತ್ತಿದೆ, ಅದನ್ನು ಸರಿಪಡಿಸುವಂತೆ ಎಲಾನ್ ಮಸ್ಕ್ ಅವರಲ್ಲಿ ಮನವಿ ಮಾಡಿದ್ದಾರೆ.

ಎಕ್ಸ್‌ನಲ್ಲಿ ಮಾಡಿದ ತನ್ನ ಪೋಸ್ಟ್‌ನಲ್ಲಿ, ತಮ್ಮ ಪುತ್ರರಿಗೆ ತಮ್ಮ ತಂದೆಯನ್ನು (ಇಮ್ರಾನ್ ಖಾನ್) ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ. 22 ತಿಂಗಳಿನಿಂದ ಅಕ್ರಮವಾಗಿ ಅವರನ್ನು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಾಜಕೀಯ ಕೈದಿಗೆ ಯಾವುದೇ ಮಾನವ ಹಕ್ಕುಗಳಿಲ್ಲದೆ ಅವರನ್ನು ಶೋಷಣೆಗೊಳಪಡಿಸಲಾಗಿದೆ. ಇದನ್ನು ಜಗತ್ತಿಗೆ ತಿಳಿಸಲು ಎಕ್ಸ್‌ ವೇದಿಕೆಯಲ್ಲಿ ಮಾತ್ರ ಸಾಧ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಗೋಲ್ಡ್‌ಸ್ಮಿತ್ ಇದಕ್ಕೂ ಮೊದಲು ಪಾಕಿಸ್ತಾನಿ ಅಧಿಕಾರಿಗಳು ತಮ್ಮ ಪುತ್ರರು ಇಮ್ರಾನ್‌ ಖಾನ್‌ ಅವರೊಂದಿಗೆ ಮಾತನಾಡುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು ಪ್ರಯತ್ನಿಸಿದರೆ ಬಂಧಿಸುವ ಬೆದರಿಕೆ ಕೂಡ ಹಾಕಲಾಗಿದೆ ಎಂದು ಅವರು ದೂರಿದ್ದಾರೆ.

‘ಇಮ್ರಾನ್ ಖಾನ್ ಅವರ ಮೇಲೆ ಜೈಲಿನಲ್ಲಿ ನಡೆಸಿಕೊಳ್ಳಲಾಗುತ್ತಿರುವ ಕುರಿತು ಅವರ ಸಹೋದರಿ ಅಲೀಮಾ ಖಾನ್ ಕೂಡ ಚಿಂತೆ ವ್ಯಕ್ತಪಡಿಸಿದ್ದರು. ಅಡಿಯಾಲಾ ಜೈಲಿನ ಬಳಿ ಮಾತನಾಡಿದ ಅವರು, ನಾವು ಕಳೆದ 8 ತಿಂಗಳಿಂದ ಇಲ್ಲಿ ಬರುತ್ತಿದ್ದೇವೆ. ಪ್ರತೀ ಮಂಗಳವಾರ ಇಲ್ಲಿ ಬಂದು ಕುಳಿತುಕೊಳ್ಳುತ್ತೇವೆ. ಆದರೆ, ನಮಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅನುಮತಿ ನೀಡಲಾಗುತ್ತಿಲ್ಲ. ಅಧಿಕಾರಿಗಳು ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಅಕ್ರಮ ಬಂಧನದಲ್ಲಿ ಅವರನ್ನು ಇಟ್ಟುಕೊಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ನಡೆಯುತ್ತಿರುವ ಈ ಹಿಂಸೆಯನ್ನು ಅವರು ಕೊನೆಗೊಳಿಸಬೇಕು’ ಎಂದು ಒತ್ತಾಯಿಸಿದ್ದರು.

ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಪರಿಸ್ಥಿತಿಗಳು ಮತ್ತು ಅವರನ್ನು ಭೇಟಿ ಮಾಡುವುದರ ಮೇಲೆ ಮುಂದುವರಿಯುತ್ತಿರುವ ನಿರ್ಬಂಧಗಳ ಬಗ್ಗೆ ಕುಟುಂಬದೊಳಗಿನ ಹೆಚ್ಚುತ್ತಿರುವ ಆತಂಕವನ್ನು ತೋರಿಸಿದೆ. ಇದೀಗ ಖಾನ್ ಅವರ ಮಾಜಿ ಪತ್ನಿ, ತನ್ನ ಎಕ್ಸ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಅವರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಆರೋಗ್ಯ ಮತ್ತು ಅವರ ಜೈಲಿನ ಪರಿಸ್ಥಿತಿಗೆ ಸಂಬಂಧಿಸಿದ ಪುರಾವೆಗಳನ್ನು ನೀಡುವಂತೆ ಕುಟುಂಬ ಸದಸ್ಯರು ಮತ್ತು ಪಿಟಿಐ ಬೆಂಬಲಿಗರಿಂದ ಹೆಚ್ಚುತ್ತಿರುವ ಒತ್ತಡದ ನಡುವೆ ಮಾಜಿ ಪತ್ನಿಯ ಈ ಆರೋಪ ಕೇಳಿಬಂದಿದೆ.

error: Content is protected !!