ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಅಗಲಿಕೆಯಿಂದ ದೇಶವೇ ಶೋಕಮಗ್ನವಾಗಿದೆ. ಇತ್ತೀಚೆಗೆ 94ನೇ ವಯಸ್ಸಿನಲ್ಲಿ ಅವರು ವಿಧಿವಶರಾಗಿದ್ದು, ಅವರ ನೆನಪುಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಭಾವುಕರಾಗಿ ಸ್ಮರಿಸಿದ್ದಾರೆ.
“ನಾನು ಮತ್ತು ನನ್ನ ದೇಶ ಮಹಾನ್ ವಿಚಾರವಾದಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಭೈರಪ್ಪನವರೊಂದಿಗೆ ನನ್ನ ವೈಯಕ್ತಿಕ ಪರಿಚಯವಿತ್ತು. ಹಲವಾರು ಸಂದರ್ಭಗಳಲ್ಲಿ ವಿಚಾರ ಮಂಥನ ನಡೆಸಿದ್ದೇವೆ. ಅವರ ಕೃತಿಗಳು ಯುವಕರಿಗೆ ದಾರಿದೀಪವಾಗಿವೆ. ನಮ್ಮ ಸಂಸ್ಕೃತಿಯನ್ನು ಹೆಮ್ಮೆ ಪಡುವುದನ್ನೂ, ಗೌರವಿಸುವುದನ್ನೂ ಅವರು ಕಲಿಸಿಕೊಟ್ಟರು. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ಡಾ. ಭೈರಪ್ಪ ಅವರ ಸಾಹಿತ್ಯ ಕೃತಿಗಳು ಅನೇಕ ಭಾಷೆಗಳಿಗೆ ಅನುವಾದವಾಗಿದ್ದು, ಇಡೀ ದೇಶದ ಓದುಗರ ಮನಸ್ಸನ್ನು ತಲುಪಿದ್ದವು. “ಅವರ ಜೊತೆಗೆ ನನ್ನ ಒಡನಾಟ ಪ್ರೇರಣಾದಾಯಕ. ಅವರ ಪುಸ್ತಕಗಳನ್ನು ಯುವಕರು ಹೆಚ್ಚು ಹೆಚ್ಚು ಓದಿ ಜೀವನದ ಪಾಠಗಳನ್ನು ಕಲಿಯಬೇಕು” ಎಂದು ಪ್ರಧಾನಿ ಮೋದಿ ಕರೆ ನೀಡಿದರು.
‘ಪರ್ವ’, ‘ಸಾರ್ಥ’, ‘ಧರ್ಮಶ್ರೀ’, ‘ಮಂದ್ರ’, ‘ಆವರಣ’ ಮುಂತಾದ ಶಾಶ್ವತ ಕೃತಿಗಳ ಮೂಲಕ ಭೈರಪ್ಪ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಅಚಲ ಸ್ಥಾನ ನಿರ್ಮಿಸಿಕೊಂಡಿದ್ದರು. ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಭೈರಪ್ಪ, ಕನ್ನಡದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು.