ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆ, ಚಿರತೆ ಮತ್ತು ಹುಲಿಗಳ ಉಪಟಳ ಮಿತಿಮೀರಿದ್ದು, ಹಲವು ಜೀವಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ, ಜನರಿಗೆ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಶುರುವಾಗಿದೆ.
ಈ ದಯನೀಯ ಪರಿಸ್ಥಿತಿಯಿಂದ ಬೇಸತ್ತ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಥಳೀಯ ಶಾಸಕ ಮಂಜುನಾಥ್ ಅವರಿಗೆ ಪತ್ರ ಬರೆದು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತಾಗಿ ವಾಹನ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದ್ದಾರೆ.

ಸಿಎಂಗೆ ವಿದ್ಯಾರ್ಥಿಗಳ ಅಳಲು:
ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ, ವಿದ್ಯಾರ್ಥಿಗಳು ತಮ್ಮ ದುಸ್ಥಿತಿಯನ್ನು ತೆರೆದಿಟ್ಟಿದ್ದಾರೆ. “ನಮ್ಮ ಗ್ರಾಮದ ರಸ್ತೆ ವ್ಯವಸ್ಥೆ ತೀರಾ ಹದಗೆಟ್ಟಿದೆ. ಕಾಡಾನೆ, ಚಿರತೆ, ಮತ್ತು ಹುಲಿಯಂತಹ ಪ್ರಾಣಿಗಳು ಇದೇ ರಸ್ತೆಯಲ್ಲಿ ಸದಾ ಸಂಚರಿಸುತ್ತಿರುತ್ತವೆ. ನಾವು ಪ್ರತಿದಿನ ಶಾಲೆ-ಕಾಲೇಜಿಗೆ ಹೋಗಲು ಸುಮಾರು 14 ಕಿಲೋಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕು” ಎಂದು ತಿಳಿಸಿದ್ದಾರೆ.
ತಮಗೆ ಶಾಲಾ ವಾಹನವಾಗಲಿ ಅಥವಾ ಸರ್ಕಾರಿ ಬಸ್ಸಿನ ವ್ಯವಸ್ಥೆಯಾಗಲಿ ಇಲ್ಲದ ಕಾರಣ, ಪ್ರತಿ ದಿನ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಜೀವ ಹಾನಿಯ ಅಪಾಯ ಹೆಚ್ಚಿರುವ ಕಾರಣ, ಆದಷ್ಟು ಬೇಗ ರಸ್ತೆಯನ್ನು ಡಾಂಬರೀಕರಣಗೊಳಿಸಿ, ಸುರಕ್ಷಿತವಾಗಿ ಶಾಲೆ ತಲುಪಲು ಬಸ್ ಅಥವಾ ವ್ಯಾನ್ ವ್ಯವಸ್ಥೆ ಕಲ್ಪಿಸುವಂತೆ ಅವರು ಸಿಎಂ ಅವರಲ್ಲಿ ಕಳಕಳಿಯಿಂದ ಮನವಿ ಮಾಡಿದ್ದಾರೆ.
ತಮಿಳುನಾಡು ಗಡಿ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿರುವ ಕಾರಣ ಚಾಮರಾಜನಗರ ಜಿಲ್ಲೆಯ ಜನರ ಆತಂಕ ಇನ್ನಷ್ಟು ಹೆಚ್ಚಾಗಿದೆ. ಹುಲಿ ಮತ್ತು ಚಿರತೆಗಳ ದಾಳಿಯಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಕೂಡ ಹೆದರುವ ಪರಿಸ್ಥಿತಿ ಉಂಟಾಗಿತ್ತು. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಮಾನವನ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚಿದಾಗ, ಅರಣ್ಯ ಇಲಾಖೆಯು ಪರಿಸ್ಥಿತಿ ನಿಯಂತ್ರಿಸಲು ಮನುಷ್ಯರು ಮುಖವಾಡಗಳನ್ನು ಧರಿಸುವಂತೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ತಮ್ಮ ಪ್ರಾಣಕ್ಕೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

