ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ನಡೆದಿದೆ. ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸ್ಯಾಮ್ಸನ್ ಕೇವಲ 2 ರನ್‌ಗಳಿಸಿ ಔಟಾಗಿದ್ದರು. ಅವರ ಪ್ರದರ್ಶನ ನಿರಾಶೆ ಮೂಡಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೆಲವು ತಿಂಗಳುಗಳ ಹಿಂದೆಯಷ್ಟೇ ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಗಮನ ಸೆಳೆದಿದ್ದರು. ಆದಾಗ್ಯೂ, ಶುಭ್‌ಮನ್ ಗಿಲ್ ತಂಡಕ್ಕೆ ಮರಳಿದ ಬಳಿಕ ಸ್ಯಾಮ್ಸನ್ ತನ್ನ ಆರಂಭಿಕ ಸ್ಥಾನ ಕಳೆದುಕೊಂಡು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾಯಿತು. ಅಲ್ಲಿ ನಿರಂತರ ಪ್ರದರ್ಶನ ನೀಡಲು ವಿಫಲರಾದ ಅವರು ಇದೀಗ ಪ್ಲೇಯಿಂಗ್ ಇಲೆವೆನ್‌ನಿಂದಲೇ ಹೊರಬಿದ್ದಿದ್ದಾರೆ.
ಅವರ ಬದಲಿಗೆ ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತಂಡಕ್ಕೆ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದ್ದ ಜಿತೇಶ್‌ಗಾಗಿ ಇದು ಆಸ್ಟ್ರೇಲಿಯಾ ವಿರುದ್ಧದ ಮೊದಲ ಸರಣಿ. ಆದರೂ ಚೊಚ್ಚಲ ಅವಕಾಶದಲ್ಲೇ ಪ್ಲೇಯಿಂಗ್ ಇಲೆವೆನ್‌ಗೆ ಸ್ಥಾನ ಪಡೆದಿರುವುದು ಅವರ ಪ್ರತಿಭೆಯ ಮೆಚ್ಚುಗೆಗೆ ಸಾಕ್ಷಿಯಾಗಿದೆ.
ಇನ್ನು ಮೂರನೇ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮೂವರು ಆಟಗಾರರ ಬದಲಾವಣೆಯನ್ನು ಮಾಡಿದೆ. ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಬದಲಿಗೆ ಅರ್ಷದೀಪ್ ಸಿಂಗ್, ಮತ್ತು ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾ ಕಣಕ್ಕಿಳಿದಿದ್ದಾರೆ.

