ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ರೋಚಕ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ನಿರ್ಣಾಯಕ ಹಂತದಲ್ಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಲವು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಮುನ್ಸೂಚನೆ ನೀಡಿದೆ.
ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಪ್ರಮುಖ ಆಟಗಾರರ ಫಿಟ್ನೆಸ್ ಕಾಯ್ದುಕೊಳ್ಳಲು ಮ್ಯಾನೇಜ್ಮೆಂಟ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಆಡಿರುವ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಇಂದಿನ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಅವರ ಅನುಪಸ್ಥಿತಿಯಲ್ಲಿ ತಂಡದ ಸಂಯೋಜನೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಾರ್ದಿಕ್ ಸ್ಥಾನಕ್ಕೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಷರ್ ಪಟೇಲ್ ಮರಳುವ ನಿರೀಕ್ಷೆಯಿದೆ. ಒಂದು ವೇಳೆ ಅವರು ಸಂಪೂರ್ಣ ಫಿಟ್ ಆಗದಿದ್ದರೆ, ಬ್ಯಾಟಿಂಗ್ ಬಲ ತುಂಬಲು ಶ್ರೇಯಸ್ ಅಯ್ಯರ್ ತಂಡ ಸೇರಿಕೊಳ್ಳಬಹುದು.
ವೇಗದ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ ಬದಲಿಗೆ ಅನುಭವಿ ಅರ್ಷದೀಪ್ ಸಿಂಗ್ ಮತ್ತೆ ತಂಡಕ್ಕೆ ಮರಳಲಿದ್ದಾರೆ. ಹಾಗೆಯೇ, ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯ್ ಬದಲಿಗೆ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.



