ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 48 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಗೆ ಆತ್ಮವಿಶ್ವಾಸದ ಆರಂಭ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 238 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ್ದು, ಇದು ಕಿವೀಸ್ ವಿರುದ್ಧ ಟಿ20ಯಲ್ಲಿನ ಭಾರತದ ಗರಿಷ್ಠ ಸ್ಕೋರ್ ಆಗಿದೆ. 239 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 190 ರನ್‌ಗಳಿಗೆ ಸೀಮಿತವಾಯಿತು.
ಪಂದ್ಯದ ಬಳಿಕ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಸೋಲಿಗೆ ಎರಡು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದರು. ಬೌಲಿಂಗ್ ವೇಳೆ ನಾವು ಅಗತ್ಯವಿರುವಷ್ಟು ನಿಯಂತ್ರಣ ತೋರಿಸಲಿಲ್ಲ. ಭಾರತೀಯ ಬ್ಯಾಟರ್‌ಗಳು ಮೊದಲಿನಿಂದಲೇ ಒತ್ತಡ ಹೇರಿದರು ಎಂದು ಹೇಳಿದರು. ಜೊತೆಗೆ, ದೊಡ್ಡ ಮೊತ್ತದ ಚೇಸಿಂಗ್ ವೇಳೆ ಪವರ್‌ಪ್ಲೇಯಲ್ಲೇ ಎರಡು ವಿಕೆಟ್ ಕಳೆದುಕೊಂಡಿದ್ದು ನಮ್ಮ ಮೇಲೆ ಹೆಚ್ಚುವರಿ ಒತ್ತಡ ತಂದಿತು ಎಂದು ಒಪ್ಪಿಕೊಂಡರು.
ಕೇವಲ 7 ಎಸೆತಗಳಲ್ಲಿ ಡಿವೋನ್ ಕಾನ್ವೇ ಮತ್ತು ರಚಿನ್ ರವೀಂದ್ರ ವಿಕೆಟ್ ಕಳೆದುಕೊಂಡಿದ್ದು ನ್ಯೂಜಿಲೆಂಡ್‌ಗೆ ದೊಡ್ಡ ಹಿನ್ನಡೆಯಾಯಿತು. ಮಧ್ಯದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಚಾಪ್‌ಮನ್ ಹೋರಾಟ ನೀಡಿದರೂ, ಆರಂಭದ ನಷ್ಟವನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್‌ಗಳು ಧೈರ್ಯವಾಗಿ ಆಡಿದ್ದು ಮತ್ತೊಂದು ಸಮಸ್ಯೆಯಾಯಿತು ಎಂದು ಸ್ಯಾಂಟ್ನರ್ ಹೇಳಿದರು.


