ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸೋಲಿನ ಬಳಿಕ ನಾಯಕ ಐಡೆನ್ ಮಾರ್ಕ್ರಮ್ ನೀಡಿದ ಪ್ರತಿಕ್ರಿಯೆ ಪಂದ್ಯಕ್ಕಿಂತಲೂ ಹೆಚ್ಚು ಗಮನ ಸೆಳೆದಿದೆ. ಭಾರತ ಎದುರು 7 ವಿಕೆಟ್‌ಗಳ ಸೋಲು ಅನುಭವಿಸಿದ ನಂತರ ಮಾತನಾಡಿದ ಮಾರ್ಕ್ರಮ್, ತಮ್ಮ ತಂಡದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.
“ಪರಿಸ್ಥಿತಿ ಬ್ಯಾಟಿಂಗ್‌ಗೆ ಸುಲಭವಾಗಿರಲಿಲ್ಲ. ಆದರೆ ನಾವು ಸತತವಾಗಿ 4–5 ವಿಕೆಟ್‌ಗಳನ್ನು ಕಳೆದುಕೊಂಡಿದ್ದು ದುಬಾರಿಯಾಯಿತು. ಭಾರತೀಯ ಬೌಲರ್‌ಗಳು ಅತ್ಯುತ್ತಮ ಲೆಂಗ್ತ್‌ನಲ್ಲಿ ಟೆಸ್ಟ್ ಪಂದ್ಯ ಶೈಲಿಯ ಬೌಲಿಂಗ್ ಮಾಡಿದರು. ಅದನ್ನು ನಿಭಾಯಿಸುವಲ್ಲಿ ನಾವು ವಿಫಲರಾದೆವು,” ಎಂದು ಮಾರ್ಕ್ರಮ್ ಹೇಳಿದರು. 140–150 ರನ್‌ಗಳ ಗುರಿ ನಿಗದಿಪಡಿಸಿದ್ದರೆ ಪಂದ್ಯ ಮತ್ತಷ್ಟು ರೋಚಕವಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.
ಭಾರತದ ಪ್ರದರ್ಶನವನ್ನು ಮೆಚ್ಚಿದ ಮಾರ್ಕ್ರಮ್, “ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಪಂದ್ಯವನ್ನು ನಮ್ಮ ಕೈಯಿಂದ ಕಸಿದುಕೊಂಡಿತು. ಪವರ್‌ಪ್ಲೇನಲ್ಲಿ ನಾವು ಸರಿಯಾದ ಯೋಜನೆ ಜಾರಿಗೆ ತರುವಲ್ಲಿ ವಿಫಲರಾದೆವು,” ಎಂದರು. ಸೋಲಿನಿಂದ ಪಾಠ ಕಲಿಯಬೇಕು, ಮುಂದಿನ ಪಂದ್ಯಗಳಲ್ಲಿ ಒತ್ತಡದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬುದರ ಮೇಲೆ ಗಮನ ಹರಿಸಲಾಗುವುದು ಎಂದು ದಕ್ಷಿಣ ಆಫ್ರಿಕಾ ನಾಯಕ ಸ್ಪಷ್ಟಪಡಿಸಿದ್ದಾರೆ.

