ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸೀಸ್ ತವರಲ್ಲಿ ಭಾರತೀಯ ಕ್ರಿಕೆಟ್ ತಂಡದ ದುರ್ಭಾಗ್ಯ ಇನ್ನೂ ಮುಗಿದಿಲ್ಲ ಅನಿಸುತ್ತಿದೆ. ಏಕದಿನ ಸರಣಿಯಲ್ಲಿ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಈಗ ಟಿ20 ಸರಣಿಯಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿದೆ. ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈಗ ಭಾರತ ಸರಣಿ ಗೆಲ್ಲಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ, ಮೂರನೇ ಪಂದ್ಯ ಕೇವಲ ಒಂದು ದಿನಗಳ ವಿರಾಮದ ನಂತರ ನಡೆಯಲಿದೆ. ಭಾನುವಾರ, ನವೆಂಬರ್ 2 ರಂದು ನಡೆಯಲಿರುವ ಈ ತೃತೀಯ ಟಿ20 ಪಂದ್ಯವು ಹಾಬರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಜರುಗಲಿದೆ. ಸ್ಥಳೀಯ ಸಮಯ ಸಂಜೆ 7:15ಕ್ಕೆ ಆರಂಭವಾಗುವ ಈ ಪಂದ್ಯವು ಭಾರತದಲ್ಲಿ ಮಧ್ಯಾಹ್ನ 1:45 ರಿಂದ ವೀಕ್ಷಿಸಬಹುದು.
ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯದ ನೇರ ಪ್ರಸಾರವನ್ನು ಜಿಯೋಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಉಚಿತವಾಗಿ ವೀಕ್ಷಿಸಬಹುದು. ಟಿವಿ ವೀಕ್ಷಕರಿಗಾಗಿ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ.

