ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳು ಕಾದಿರುವ ಭಾರತ–ಆಸ್ಟ್ರೇಲಿಯಾ ಟಿ20 ಸರಣಿಯು ಅಕ್ಟೋಬರ್ 29ರಂದು ಕ್ಯಾನ್‍ಬೆರಾದಲ್ಲಿ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿದ್ದು, ಪ್ರಥಮ ಪಂದ್ಯ ಕ್ಯಾನ್‍ಬೆರಾದಲ್ಲಿ, ದ್ವಿತೀಯ ಪಂದ್ಯ ಮೆಲ್ಬೋರ್ನ್‌ನಲ್ಲಿ, ಮೂರನೇ ಪಂದ್ಯ ಹೋಬಾರ್ಟ್‌ನಲ್ಲಿ ನಡೆಯಲಿದೆ. ಕೊನೆಯ ಎರಡು ಪಂದ್ಯಗಳಿಗೆ ಕ್ಯಾರರಾ ಮತ್ತು ಬ್ರಿಸ್ಬೇನ್ ಆತಿಥ್ಯ ವಹಿಸಲಿವೆ.
ಈ ಪಂದ್ಯದಲ್ಲಿ ಭಾರತದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ಹೊರಗುಳಿದಿದ್ದಾರೆ. ಏಷ್ಯಾಕಪ್ ವೇಳೆ ಅವರಿಗೆ ಸ್ನಾಯು ಸೆಳೆತದ ಸಮಸ್ಯೆ ಉಂಟಾಗಿದ್ದು, ಅವರು ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ. ಅವರ ಬದಲಿಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಶಿವಂ ದುಬೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರತದ ಬೌಲಿಂಗ್ ಘಟಕ ಈ ಸರಣಿಯಲ್ಲಿ ಶಕ್ತಿಶಾಲಿಯಾಗಲಿದೆ. ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ವೇಗಿಗಳಾಗಿ ಬೌಲಿಂಗ್ ನಿಭಾಯಿಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅವರ ಜೊತೆಗೆ ಅಕ್ಷರ್ ಪಟೇಲ್ ಸಹ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಶುಭ್‍ಮನ್ ಗಿಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಇಬ್ಬರ ನಡುವಿನ ಬ್ಯಾಟಿಂಗ್ ಸಂಯೋಜನೆ ಹಾಗೂ ಯುವ ಆಟಗಾರರ ಆಟ ಈ ಸರಣಿಯ ಆಕರ್ಷಣೆಯಾಗಲಿದೆ.

