ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಲಯದ ಬಗ್ಗೆ ಇದೀಗ ಕ್ರೀಡಾ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ನಂತರ, ಅವರ ಫಾರ್ಮ್ ಬಗ್ಗೆ ತೀವ್ರ ಪ್ರಶ್ನೆಗಳು ಎದ್ದಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನಿರಂತರವಾಗಿ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ಮೊದಲ ಪಂದ್ಯದಲ್ಲಿ 12, ಎರಡನೇ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿ ಔಟಾಗಿದ್ದ ಸೂರ್ಯ, ನಿರ್ಣಾಯಕ ಮೂರನೇ ಪಂದ್ಯದಲ್ಲೂ ಮತ್ತೊಮ್ಮೆ 12 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಟೀಮ್ ಇಂಡಿಯಾ ನಾಯಕನ ಬ್ಯಾಟ್‌ನಿಂದ ಕಳೆದೆರಡು ವರ್ಷಗಳಲ್ಲಿ ಕೇವಲ ಎರಡು ಅರ್ಧಶತಕಗಳು ಮಾತ್ರ ಮೂಡಿಬಂದಿದ್ದು, ಒಂದು ವರ್ಷದಿಂದ ಯಾವುದೇ ಅರ್ಧಶತಕ ದಾಖಲಾಗಿಲ್ಲ.
ಸರಣಿ ಮುಗಿದ ನಂತರ ಅವರ ಬ್ಯಾಟಿಂಗ್ ಲಯದ ಬಗ್ಗೆ ಪ್ರಶ್ನಿಸಿದಾಗ ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್‌ಗೆ ಕಾರಣವಾಗಿದೆ.
“ನಾನು ಫಾರ್ಮ್ ಕಳೆದುಕೊಂಡಿಲ್ಲ. ನೆಟ್ಸ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇನೆ. ರನ್‌ಗಳು ಬರಬೇಕಾದ ಸಂದರ್ಭದಲ್ಲಿ ಖಂಡಿತವಾಗಿಯೂ ರನ್‌ಗಳು ಬರುತ್ತವೆ. ಸದ್ಯ ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್‌ಗಳಿಸುತ್ತಿಲ್ಲ ಅಷ್ಟೇ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
‘ನೆಟ್ಸ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದೇನೆ’ ಎಂಬ ಸೂರ್ಯ ಅವರ ಹೇಳಿಕೆಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ. “ನೆಟ್ಸ್ ಸ್ಕೋರ್ ಮುಖ್ಯವಲ್ಲ, ಮೈದಾನದಲ್ಲಿ ರನ್ ಗಳಿಸುವುದು ಮುಖ್ಯ,” ಎಂದು ಅಭಿಮಾನಿಗಳು ಮತ್ತು ವಿಮರ್ಶಕರು ಟೀಕಿಸಿದ್ದಾರೆ. ಕಳೆದ ಒಂದು ವರ್ಷದಿಂದ ಒಂದೂ ಅರ್ಧಶತಕ ಬಾರಿಸದೇ ‘ಫಾರ್ಮ್ ಕಳೆದುಕೊಂಡಿಲ್ಲ’ ಎಂದು ಹೇಳುವುದು ತರ್ಕಕ್ಕೆ ನಿಲುಕದ್ದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

