March 2, 2026
Monday, March 2, 2026
spot_img

ತರ್ಕದ ತಕ್ಕಡಿಯಲ್ಲಿ ಭಾರತ-ಇರಾನ್ ಸ್ನೇಹ: ಖಮೇನಿ ಹತ್ಯೆ ವಿಷಯದಲ್ಲಿ ದೆಹಲಿಯ ಮೌನಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಯನ್ನು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಭಾರತ ಏಕೆ ಅಧಿಕೃತವಾಗಿ ಖಂಡಿಸಿಲ್ಲ ಎಂಬುದು ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಭಾರತ ಮತ್ತು ಇರಾನ್ ನಡುವೆ ದಶಕಗಳ ಕಾಲದ ಆಪ್ತ ಸಂಬಂಧವಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಳೆದಿರುವ ಮೌನ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಭಾರತಕ್ಕೆ ಇರಾನ್ ಕೇವಲ ಒಂದು ವ್ಯಾಪಾರೀ ರಾಷ್ಟ್ರವಲ್ಲ; ಅದು ಮಧ್ಯ ಏಷ್ಯಾದ ಹೆಬ್ಬಾಗಿಲು. 2016ರಲ್ಲಿ ಪ್ರಧಾನಿ ಮೋದಿ ಅವರು ಟೆಹ್ರಾನ್‌ಗೆ ಭೇಟಿ ನೀಡಿದ್ದಾಗ ಖಮೇನಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದರು. ಇದರ ಫಲವಾಗಿ, ವಿದೇಶಿ ಬಂದರೊಂದರ ನಿರ್ವಹಣೆಯ ಜವಾಬ್ದಾರಿಯನ್ನು ಭಾರತ ಮೊದಲ ಬಾರಿಗೆ ವಹಿಸಿಕೊಂಡಿತು. ಪಾಕಿಸ್ತಾನವನ್ನು ಅವಲಂಬಿಸದೆಯೇ ಅಫ್ಘಾನಿಸ್ತಾನ ಮತ್ತು ರಷ್ಯಾದೊಂದಿಗೆ ವ್ಯಾಪಾರ ನಡೆಸಲು ಚಾಬಹಾರ್ ಬಂದರು ಭಾರತಕ್ಕೆ ಅತಿ ಮುಖ್ಯವಾಗಿದೆ. ಇದು ಅರಬ್ಬಿ ಸಮುದ್ರದಲ್ಲಿ ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಭಾರತದ ಪ್ರಬಲ ಅಸ್ತ್ರವೂ ಹೌದು.

ಒಂದು ಕಾಲದಲ್ಲಿ ಇರಾನ್‌ನಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿದ್ದ ಎರಡನೇ ರಾಷ್ಟ್ರ ಭಾರತವಾಗಿತ್ತು. ಆದರೆ, 2018ರಲ್ಲಿ ಅಮೆರಿಕವು ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿದು ಕಠಿಣ ನಿರ್ಬಂಧಗಳನ್ನು ಹೇರಿದಾಗ, ಭಾರತಕ್ಕೆ ಸಂಕಷ್ಟ ಎದುರಾಯಿತು. ಅಂತಿಮವಾಗಿ ತನ್ನ ಆರ್ಥಿಕ ಹಿತಾಸಕ್ತಿ ಮತ್ತು ಅಮೆರಿಕದೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು 2019ರಿಂದ ಭಾರತ ಇರಾನ್‌ನಿಂದ ತೈಲ ಆಮದನ್ನು ಸ್ಥಗಿತಗೊಳಿಸಿತು.

ಇರಾನ್ ಜೊತೆ ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದರೂ, ಇಸ್ರೇಲ್ ಭಾರತದ ಅತ್ಯಾಪ್ತ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ. ಅತ್ತ ಅಮೆರಿಕದ ಜೊತೆಗಿನ ಸಂಬಂಧವೂ ಅತಿ ಮುಖ್ಯ. ಹೀಗಾಗಿ, ಒಂದು ಕಡೆ ತನ್ನ ಹಿತಾಸಕ್ತಿಯ ಚಾಬಹಾರ್ ಬಂದರು, ಮತ್ತೊಂದು ಕಡೆ ರಕ್ಷಣೆ ಮತ್ತು ಜಾಗತಿಕ ರಾಜಕಾರಣದ ಸಮೀಕರಣಗಳನ್ನು ಸರಿದೂಗಿಸಲು ಭಾರತ ಈ ಸೂಕ್ಷ್ಮ ವಿಚಾರದಲ್ಲಿ ‘ಕಾಯ್ದು ನೋಡುವ’ ತಂತ್ರ ಅನುಸರಿಸುತ್ತಿರುವಂತೆ ಕಾಣುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !