ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಾತೃಭೂಮಿ ಭಾರತ, ಪಾಕ್ ನನ್ನ ಜನ್ಮಭೂಮಿ ಎಂದು ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನೀವು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಾರತದ ಆಂತರಿಕ ವಿಷಯಗಳ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತೀರಿ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಕೆಲವರು ಭಾರತದ ಪೌರತ್ವಕ್ಕಾಗಿ ನಾನು ಹೀಗೆ ನಡೆದುಕೊಳ್ಳುತ್ತೇನೆ ಎಂದು ಆರೋಪಿಸುತ್ತಿದ್ದಾರೆ. ಆದ್ರೆ ನನಗೆ ಭಾರತದ ಪೌರತ್ವ ಪಡೆಯುವ ಯಾವ ಆಲೋಚನೆಯೂ ಇಲ್ಲ. ನನ್ನಂತವರಿಗೆ ಅಂತಹ ಯೋಚನೆ ಬಂದರೆ ಸಿಎಎ ಈಗಾಗಲೇ ಜಾರಿಯಲ್ಲಿದೆ. ಪಾಕಿಸ್ತಾನ ನನ್ನ ಜನ್ಮಭೂಮಿಯಾಗಿರಬಹುದು ಆದರೆ ಭಾರತ ನನ್ನ ಪೂರ್ವಜರ ಭೂಮಿ, ನನ್ನ ಮಾತೃಭೂಮಿ. ನನ್ನ ಪಾಲಿಗೆ ಭಾರತ ಒಂದು ದೇವಾಲಯದಂತೆ ಎಂದು ಕೊಂಡಾಡಿದ್ದಾರೆ.
ನನ್ನ ಮಾತುಗಳು ಭಾರತದ ಪೌರತ್ವಕ್ಕಾಗಿ ಎಂಬ ಆರೋಪ ಸಂಪೂರ್ಣ ತಪ್ಪು. ನಾನು ಧರ್ಮದ ಪರವಾಗಿ ನಿಲ್ಲುವುದನ್ನು ಮತ್ತು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರವಿರೋಧಿಗಳು, ಹುಸಿ ಜಾತ್ಯತೀತರ ವಿರುದ್ಧದ ಸಮರವನ್ನು ಮುಂದುವರಿಸುತ್ತೇನೆ. ಪಾಕಿಸ್ತಾನದ ಜನರಿಂದಲೂ ನಾನು ಪ್ರೀತಿಯನ್ನು ಪಡೆದಿದ್ದೇನೆ. ಆ ಪ್ರೀತಿಯ ಜೊತೆಗೆ, ಬಲವಂತದ ಮತಾಂತರದ ಪ್ರಯತ್ನ, ಪಾಕ್‌ನ ಅಧಿಕಾರಿಗಳು ಮತ್ತು ಪಿಸಿಬಿಯಿಂದ (PCB) ತಾರತಮ್ಯವನ್ನು ಸಹ ಎದುರಿಸಿದ್ದೇನೆ ಎಂದು ತಾವು ಅನುಭವಿಸಿದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಕೊನೆಯಲ್ಲಿ ʻಜೈ ಶ್ರೀರಾಮ್ʼ ಘೋಷದೊಂದಿದೆ, ನಾನು ನನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿ, ಸಂತೋಷವಾಗಿದ್ದೇನೆ. ನನ್ನ ಭವಿಷ್ಯ ಭಗವಾನ್ ರಾಮನ ಕೈಯಲ್ಲಿದೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.