ನಮ್ಮ ಹಿತಾಸಕ್ತಿಯನ್ನು ರಕ್ಷಿಸಲು ಭಾರತ ಸಿದ್ದ: ಟ್ರಂಪ್​ ಹೆಚ್ಚುವರಿ ಸುಂಕದ ವಿರುದ್ಧ ಗುಡುಗಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು, ಭಾರತದ ಮೇಲೆ ಹೆಚ್ಚುವರಿ ಶೇ. 25 ರಷ್ಟು ವ್ಯಾಪಾರ ಸುಂಕ ಘೋಷಿಸಿದ್ದಾರೆ. ಇದರೊಂದಿಗೆ ಭಾರತದ ಸರಕುಗಳ ಮೇಲಿನ ಅಮೆರಿಕದ ತೆರಿಗೆಯು ಶೇ. 50 ರಷ್ಟಾಗಿದೆ. ಇದೀಗ ಈ ನಡೆಯನ್ನು ಖಂಡಿಸಿರುವ ಭಾರತ, ‘ಈ ಕ್ರಮಗಳು ನ್ಯಾಯಸಮ್ಮತವಲ್ಲದ್ದು ಮತ್ತು ಅಸಮಂಜಸವಾಗಿದೆ. ಭಾರತವು ತನ್ನ ಹಿತಾಸಕ್ತಿಯನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಹೇಳಿದೆ.

ರಷ್ಯಾದೊಂದಿಗೆ ಭಾರತ ತೈಲ ವ್ಯಾಪಾರ ನಡೆಸುವುದಕ್ಕೆ ದಂಡವಾಗಿ ಹೆಚ್ಚುವರಿ ಶೇ 25 ರಷ್ಟು (ಈ ಹಿಂದೆ ಶೇ 25 ರಷ್ಟು ಸುಂಕ ವಿಧಿಸಿತ್ತು) ಸುಂಕ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಟ್ರಂಪ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.

ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನೇ ಗುರಿಯಾಗಿಸಿ ಅಮೆರಿಕವು ಭಾರತದ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುತ್ತಿದೆ. ಈ ವಿಚಾರದಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಅಮದು ಮಾರುಕಟ್ಟೆಗೆ ಅನುಗುಣವಾಗಿದೆ. ಭಾರತದ 1.4 ಶತಕೋಟಿ ಜನರ ಇಂಧನ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತರ ದೇಶಗಳು ತಮ್ಮ ರಾಷ್ಟ್ರದ ಹಿತಾಸಕ್ತಿಗಾಗಿ ಸರಕನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ಭಾರತದ ಮೇಲೆ ಮಾತ್ರ ಅಮೆರಿಕ ಹೆಚ್ಚುವರಿ ಸುಂಕ ವಿಧಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!