Tuesday, December 30, 2025

IPO ಮಾರುಕಟ್ಟೆಯಲ್ಲಿ ಭಾರತವೇ ಬಾಸ್: ಸಂಖ್ಯೆಯಲ್ಲಿ ನಂ.1, ವಿಶ್ವಾಸದಲ್ಲಿ ವಿಶ್ವಮಟ್ಟ!

ಹೊಸದಿಗಂತ ಮುಂಬೈ:

ಒಂದು ಕಾಲದಲ್ಲಿ ಶೇರು ಮಾರುಕಟ್ಟೆ ಎಂದರೆ ಕೇವಲ ಮುಂಬೈ ಅಥವಾ ದೆಹಲಿಯಂತಹ ಮೆಟ್ರೋ ನಗರಗಳ ಶ್ರೀಮಂತರ ಆಟದ ಮೈದಾನವಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ (2020-2025) ಭಾರತದ ಇಕ್ವಿಟಿ ಕ್ಯಾಪಿಟಲ್ ಮಾರ್ಕೆಟ್ ಸಂಪೂರ್ಣ ರೂಪಾಂತರಗೊಂಡಿದೆ. ಪ್ಯಾಂಟೋಮ್ಯಾಥ್ ಕ್ಯಾಪಿಟಲ್‌ನ ‘ಪ್ರೈಮರಿ ಪಲ್ಸ್ 2025’ ವರದಿಯ ಪ್ರಕಾರ, ಭಾರತದ ಪ್ರೈಮರಿ ಮಾರುಕಟ್ಟೆ ಈಗ ಕೇವಲ ಹಣ ಸಂಗ್ರಹಿಸುವ ವೇದಿಕೆಯಾಗಿ ಉಳಿದಿಲ್ಲ. ಬದಲಿಗೆ ದೇಶದ ಆರ್ಥಿಕ ಎಂಜಿನ್ ಅನ್ನು ಚಲಾಯಿಸುವ ಇಂಧನವಾಗಿ ಮಾರ್ಪಟ್ಟಿದೆ.

2025ನೇ ವರ್ಷ ಭಾರತದ ಪಾಲಿಗೆ ಐತಿಹಾಸಿಕ. ಸುಮಾರು 18 ವರ್ಷಗಳ ನಂತರ (2007ರ ಬಳಿಕ ಮೊದಲ ಬಾರಿಗೆ), ಮೇನ್‌ಬೋರ್ಡ್ IPOಗಳ ಸಂಖ್ಯೆ 100ರ ಗಡಿ ದಾಟಿದೆ. ಇಂದು ಐಪಿಒ ಡೀಲ್‌ಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ನಂಬರ್ 1 ಸ್ಥಾನದಲ್ಲಿದೆ. ವಿಶೇಷವೆಂದರೆ, ಇದು ಕೇವಲ ದೊಡ್ಡ ಕಂಪನಿಗಳಿಗೆ ಸೀಮಿತವಾಗಿಲ್ಲ. ರು. 100 ಕೋಟಿಯಿಂದ 2,000 ಕೋಟಿಯವರೆಗಿನ ಮಧ್ಯಮ ಗಾತ್ರದ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಮಾರುಕಟ್ಟೆಯ ಆಳವನ್ನು ತೋರಿಸುತ್ತದೆ.

ಈ ವರದಿಯ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಹೂಡಿಕೆದಾರರ ಭೌಗೋಳಿಕ ವಿಸ್ತರಣೆ. ಮುಂಬೈ ಮತ್ತು ಗುಜರಾತ್‌ನ ನಗರಗಳು ಇಂದಿಗೂ ಮಾರುಕಟ್ಟೆಯ ಬೆನ್ನೆಲುಬಾಗಿವೆ ನಿಜ (ಸುಮಾರು 37-38% ಪಾಲು). ಆದರೆ ಈಗ ಛತ್ತೀಸ್‌ಗಢದ ಭಿಲಾಯಿ, ಒಡಿಶಾದ ಕೆಂದ್ರಪಾಡಾ, ಮತ್ತು ಹರಿಯಾಣದ ಹಿಸಾರ್‌ನಂತಹ ಸಣ್ಣ ನಗರಗಳಿಂದಲೂ ಹೂಡಿಕೆ ಹರಿದು ಬರುತ್ತಿದೆ. ಸಾಮಾನ್ಯ ಜನರಲ್ಲಿ ಇಕ್ವಿಟಿ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ.

ಸಾಮಾನ್ಯವಾಗಿ ಐಪಿಒ ಎಂದರೆ ಪ್ರವರ್ತಕರು ತಮ್ಮ ಪಾಲನ್ನು ಮಾರಿ ಹಣ ಮಾಡಿಕೊಳ್ಳುವ ದಾರಿ ಎಂದು ನಂಬಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಸಂಗ್ರಹವಾದ ಹಣದ 75% ಕ್ಕಿಂತ ಹೆಚ್ಚು ಭಾಗ ಉತ್ಪಾದಕ ಕೆಲಸಗಳಿಗೆ ಬಳಕೆಯಾಗುತ್ತಿದೆ.

ಪ್ಯಾಂಟೋಮ್ಯಾಥ್ ಕ್ಯಾಪಿಟಲ್‌ನ ಮಹಾವೀರ್ ಲುನಾವತ್ ಅವರು ಹೇಳುವಂತೆ, ಭಾರತದ ಮಾರುಕಟ್ಟೆ ಈಗ ‘ತಾತ್ಕಾಲಿಕ ಉತ್ಸಾಹ’ದಿಂದ ‘ರಚನಾತ್ಮಕ ಪಕ್ವತೆ’ಯ ಕಡೆಗೆ ಸಾಗಿದೆ. ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ ಹೂಡಿಕೆದಾರರು ಕಂಪನಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹೂಡಿಕೆ ಮಾಡುತ್ತಿರುವುದು ಮಾರುಕಟ್ಟೆಗೆ ಜಾಗತಿಕ ವಿಶ್ವಾಸಾರ್ಹತೆ ತಂದುಕೊಟ್ಟಿದೆ.

error: Content is protected !!