ಹೊಸ ದಿಗಂತ ಡಿಜಿಟಲ್ ಡೆಸ್ಕ್:
2025-26ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು 31.25 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸೇರ್ಪಡೆಯಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಒಡಿಶಾದ ಪುರಿಯಲ್ಲಿ ನಡೆದ ಗ್ಲೋಬಲ್ ಎನರ್ಜಿ ಲೀಡರ್ಸ್ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ 24.28 GW ಸೌರಶಕ್ತಿ ಸೇರಿದಂತೆ 31.25 GW ಪಳೆಯುಳಿಕೆಯೇತರ ಸಾಮರ್ಥ್ಯವನ್ನು ದಾಖಲಿಸಿದೆ . 2022 ರಲ್ಲಿ 1 TW ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ 70 ವರ್ಷಗಳನ್ನು ತೆಗೆದುಕೊಂಡಿದ್ದರೆ, ಎರಡೇ ವರ್ಷದಲ್ಲಿ ಅಂದರೆ 2024ರ ವೇಳೆಗೆ 2 TW ಅನ್ನು ಸಾಧಿಸಲಾಗಿದೆ. ಜಾಗತಿಕವಾಗಿ ಈ ಸ್ಫೋಟಕ ಏರಿಕೆಗೆ ಭಾರತ ಪ್ರಮುಖ ಚಾಲಕವಾಗಿದೆ ಎಂದು ಪ್ರತಿಪಾದಿಸಿದರು.
ಕಳೆದ 11 ವರ್ಷಗಳಲ್ಲಿ ದೇಶದ ಸೌರ ಸಾಮರ್ಥ್ಯ ಕೇವಲ 2.8 GW ಇತ್ತು. ಇದೀಗ ಸುಮಾರು 130 GW ಗೆ ಬೆಳೆದಿದೆ. 2022 ಮತ್ತು 2024ರ ನಡುವೆ, ಭಾರತ ಜಾಗತಿಕ ಸೌರ ಸೇರ್ಪಡೆಗಳಿಗೆ 46 GW ಕೊಡುಗೆ ನೀಡಿದ್ದು, ಮೂರನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರವಾಗಿದೆ ಎಂದು ಹೇಳಿದರು.
ಭಾರತ ವಿಶ್ವದ 5ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದ್ದಲ್ಲದೆ, ಕಲ್ಲಿದ್ದಲಿನ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಹೇರಳ ಕಲ್ಲಿದ್ದಲು ಇದ್ದರೂ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗ ಪಡೆಯುತ್ತಿದೆ. ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಶಕ್ತಿಯೊಂದಿಗೆ ಸ್ಥಿರವಾಗಿ ಸಮತೋಲನಗೊಳಿಸುತ್ತಿದೆ ಎಂದರು.
ಪಿಎಂ ಸೂರ್ಯ ಘರ್ ಯೋಜನೆಯಡಿ 1.6 ಲಕ್ಷ ಮನೆಗಳು ಮೇಲ್ಛಾವಣಿ ಸೌರಶಕ್ತಿಗಾಗಿ ಅರ್ಜಿ ಸಲ್ಲಿಸಿದ್ದು, 23,000ಕ್ಕೂ ಹೆಚ್ಚು ಸ್ಥಾಪನೆಗಳು ಪೂರ್ಣಗೊಂಡಿವೆ ಮತ್ತು 19,200ಕ್ಕೂ ಹೆಚ್ಚು ಕುಟುಂಬಗಳು 147 ರೂ. ಕೋಟಿಗಿಂತ ಹೆಚ್ಚಿನ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದಿವೆ ಎಂದು ಹೇಳಿದರು.

