ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಈ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರು ಮೋದಿ ಮಾಲ್ಡೀವ್ಸ್‌ಗೆ ಬಂದಿಳಿಯುತ್ತಲೇ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಿದ್ದಾರೆ.
ಆದರೆ ಅಂದು 2023ರ ಕೊನೆಯಲ್ಲಿ ’ಇಂಡಿಯಾ ಔಟ್’ ಅಭಿಯಾನದ ಮೂಲಕ ಮೊಹಮ್ಮದ್ ಮುಯಿಜ್ಜು ಅಧಿಕಾರಕ್ಕೆ ಬಂದಿದ್ದರು. ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದರಿಂದ, ಪ್ರಮುಖವಾಗಿ ಮಾಲ್ಡೀವ್ಸ್, ಪ್ರವಾಸೋದ್ಯಮದಲ್ಲಿ ಭಾರೀ ಪೆಟ್ಟನ್ನು ತಿಂದಿತ್ತು. ಭಾರತೀಯರು ಮಾಲ್ಡೀವ್ಸ್ ದೇಶಕ್ಕೆ ಪ್ರವಾಸ ಹೋಗುವುದನ್ನು ಕಮ್ಮಿ ಮಾಡಿದ್ದರು.
ಚೀನಾ ದೇಶಕ್ಕೆ ಹತ್ತಿರವಾಗುವ ಮೂಲಕ ಮಾಲ್ಡೀವ್ಸ್, ಭಾರತವನ್ನು ದೂರವಿಡುವ ಪ್ರಯತ್ನವನ್ನು ಮಾಡಿತ್ತು. ಈಗ, ಅಲ್ಲಿನ ಅರವತ್ತನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ಮೋದಿಯವರನ್ನು ಖುದ್ದು ಅಲ್ಲಿನ ಅಧ್ಯಕ್ಷರೇ ದೇಶಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ, ಮೋದಿ, ಹಿಂದೂ ಮಹಾಸಾಗರದಲ್ಲಿರುವ ರಿಪಬ್ಲಿಕ್ ಆಫ್ ಮಾಲ್ಡೀವ್ಸ್ ದೇಶಕ್ಕೆ ಭೇಟಿಕೊಟ್ಟಿದ್ದಾರೆ.
ಸೇನಾ ಪ್ರಧಾನ ಕಚೇರಿ ಹೊರಗಡೆ ದೊಡ್ಡ ಕಟೌಟ್ ಹಾಕಿ ಮೋದಿ ಅವರಿಗೆ ಮಾಲ್ಡೀವ್ಸ್ ಗೌರವ ನೀಡಿದೆ.
ಅಂದು ಮಾನವೀಯ ದೃಷ್ಟಿಯಿಂದ ಭಾರತ ಕೊಡುಗೆಯಾಗಿ ನೀಡಿದ್ದರೂ ಮಾಲ್ಡೀವ್ಸ್‌ನಲ್ಲಿ ಇದೊಂದು ವಿವಾದವಾಗಿ ಹೊರಹೊಮ್ಮಿತ್ತು. ಭಾರತ ತನ್ನ ಮಿಲಿಟರಿ ನೆಲೆಯಾಗಿ ಮಾಲ್ಡೀವ್ಸ್‌ನ್ನು ಬಳಸಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಯಿತು.
2020ರಲ್ಲಿ ಇಂಡಿಯಾ ಔಟ್ ವಿಚಾರ ಜೋರಾಗಿ ಚರ್ಚೆ ಆಗತೊಡಗಿತು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರದ ಬಗ್ಗೆ ಅಪಪ್ರಚಾರ ಮಾಡಲಾಯಿತು. ಇಂಡಿಯಾ ಔಟ್ ಪ್ರಚಾರಕ್ಕೆ ಚೀನಾ ಹಿಂದುಗಡೆಯಿಂದ ಬೆಂಬಲ ನೀಡಿತು. ಅಂತಿಮವಾಗಿ 2023 ರ ಚುನಾವಣೆಯಲ್ಲಿ ಭಾರತದ ವಿರೋಧಿಯಾಗಿ ಮೊಹಮ್ಮದ್ ಮುಯಿಜು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮುಯಿಜು ಚೀನಾ, ಟರ್ಕಿಗೆ ಭೇಟಿ ನೀಡಯವ ಮೂಲಕ ಭಾರತದ ವಿರೋಧಿ ಧೋರಣೆ ತೋರಲು ಆರಂಭಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಯಾವೊಬ್ಬ ಭಾರತೀಯ ಸೈನಿಕ ಮಾಲ್ಡೀವ್ಸ್‌ನಲ್ಲಿ ಇರಬಾರದು, ಭಾರತದ ಸೈನಿಕರು ಮಾಲ್ಡೀವ್ಸ್ ತೊರೆಯಬೇಕು ಎಂದು ತಾಕೀತು ಮಾಡಿದರು.
ಕಿತ್ತಾಟ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎಂಬ ಚರ್ಚೆ ಆರಂಭವಾಯಿತು. ಈ ನಡುವೆ ಮಾಲ್ದೀವ್ಸ್‌ನ ಇಬ್ಬರು ಸಚಿವರು ಪ್ರಧಾನಿ ಮೋದಿ ಕುರಿತು ಅವಹೇಳನಕಾರಿಯಾಗಿ ಕಮೆಂಟ್ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭವಾಯಿತು.
ಅಭಿಯಾನ ಜೋರಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಭಾರೀ ಇಳಿಕೆಯಾಗಿದ್ದು ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗತೊಡಗಿತು. ಮಾಲ್ಡೀವ್ಸ್ ಆದಾಯ ಯಾವುದು ಎಂದರೆ ಪ್ರವಾಸೋದ್ಯಮ. ಅದರಲ್ಲೂ ಭಾರತದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳುತ್ತಿದ್ದರು. ಯಾವಾಗ ಪ್ರವಾಸೋದ್ಯಮಕ್ಕೆ ಪೆಟ್ಟು ಬಿತ್ತೋ ಆರ್ಥಿಕತೆ ನೆಲಕಚ್ಚಲು ಆರಂಭವಾಯಿತು. ಮಾಲ್ಡೀವ್ಸ್ ಸರ್ಕಾರವೇ ಭಾರತದಲ್ಲಿ ಪ್ರವಾಸೋದ್ಯಮ ಪ್ರಚಾರ ಮಾಡಿದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಭಾರತದ ಜೊತೆ ಸಂಬಂಧ ಹಾಳಾದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎನ್ನುವುದನ್ನು ಅರಿತ ಮುಯಿಜು ಈಗ ಮೋದಿ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಸಂಬಂಧ ಸುಧಾರಿಸಲು ಮುಂದಾಗುತ್ತಿದ್ದಾರೆ.