ಹೊಸದಿಗಂತ ಡಿಜಿಟಲ್ ಡೆಸ್ಕ್:
2040ರ ವೇಳೆಗೆ ಭಾರತವು 100ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನುಹೊಂದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಪ್ರಯುಕ್ತ ಅವರು ಬಾಹ್ಯಾಕಾಶ ವಲಯಕ್ಕೆ ಸಮಗ್ರ 15 ವರ್ಷಗಳ ಮಾರ್ಗಸೂಚಿಯನ್ನು ಅನಾವರಣಗೊಳಿಸಿ ಮಾತನಾಡಿ, ರಾಷ್ಟ್ರೀಯ ಉದ್ದೇಶಗಳಿಗಾಗಿ ರೂಪಿಸಿರುವ ಈ ಮಾರ್ಗಸೂಚಿಯು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಾರ್ಯತಂತ್ರದ ಕ್ರಮವಾಗಿದೆ ಎಂದು ಹೇಳಿದರು.
ಭಾರತ ಉಡಾವಣೆ ಮಾಡಲಿರುವ ಉಪಗ್ರಹಗಳ ಪೈಕಿ ಸರಿಸುಮಾರು ಶೇ. 70ರಷ್ಟು ಸಣ್ಣ ಉಪಗ್ರಹಗಳಾಗಿವೆ. ಇವುಗಳನ್ನು ಖಾಸಗಿ ಸಂಸ್ಥೆಗಳು ಕೂಡ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಆಹಾರ, ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಿಪತ್ತು ಅನ್ನು ಎದುರಿಸಲು, ಪರಿಸರ ಸುಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಯನ್ನು ಕಂಡು ಹಿಡಿಯಲು ಇದು ಸಹಾಯ ಮಾಡುತ್ತದೆ . ಸಣ್ಣ ಉಪಗ್ರಹಗಳ ಮೂಲಕ ಭಾರತವು ಮೂಲಸೌಕರ್ಯ ಮೇಲ್ವಿಚಾರಣೆ ಮಾಡುವುದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಭೂ ಮಾಲೀಕತ್ವದ ನಕ್ಷೆಯವರೆಗೆ ತನ್ನ ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಈ ಮಾರ್ಗಸೂಚಿಯು ಖಾಸಗಿ ವಲಯವನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬಾಹ್ಯಾಕಾಶ ವಲಯವು ಇನ್ನು ಮುಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಸೀಮಿತವಾಗಿಲ್ಲ, ಬದಲಾಗಿ ನೂರಾರು ನವೋದ್ಯಮಗಳು ಮತ್ತು ಖಾಸಗಿ ಕಂಪನಿಗಳೊಂದಿಗೆ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿದೆ ಎಂದು ಹೇಳಿದರು.