Wednesday, September 10, 2025

ಮತ್ತೆ ಗಟ್ಟಿಗೊಳ್ಳುತ್ತ ಭಾರತ-ಅಮೆರಿಕ ಬಾಂಧವ್ಯ: ಶೀಘ್ರದಲ್ಲೇ ಮೋದಿ-ಟ್ರಂಪ್ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ದೇಶಗಳ ರಾಜತಾಂತ್ರಿಕ ಬಾಂಧವ್ಯವು ಮತ್ತೆ ಹಳಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ಹೇಳಿಕೆಗಳೊಂದಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆ ಎರಡೂ ರಾಷ್ಟ್ರಗಳ ಸ್ನೇಹವನ್ನು ಮತ್ತಷ್ಟು ಬಲಪಡಿಸಬಹುದಾದ ಸೂಚನೆ ನೀಡಿದೆ.

ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ವೇದಿಕೆಯಲ್ಲಿ, ಭಾರತ ಮತ್ತು ಅಮೆರಿಕ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕಲು ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪ್ರತಿಕ್ರಿಯೆ ನೀಡಿದರು. ಅವರು ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು ಎಂದೂ, ಮುಂದಿನ ದಿನಗಳಲ್ಲಿ ವ್ಯಾಪಾರ ಮಾತುಕತೆಗಳು ಎರಡೂ ದೇಶಗಳ ಪಾಲುದಾರಿಕೆಗೆ ಹೊಸ ಅವಕಾಶಗಳನ್ನು ತರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಅವರು, “ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ. ಎರಡೂ ದೇಶಗಳ ಜನತೆಗೆ ಉಜ್ವಲ ಮತ್ತು ಸಮೃದ್ಧ ಭವಿಷ್ಯ ಖಚಿತಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಟ್ರಂಪ್ ಕೂಡ “ಮುಂದಿನ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ. ನಮ್ಮ ಮಾತುಕತೆ ಎರಡೂ ದೇಶಗಳಿಗೆ ಯಶಸ್ವಿ ತೀರ್ಮಾನ ತರುತ್ತದೆ ಎಂಬ ವಿಶ್ವಾಸವಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ