ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಣ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಬ್ರಿಸ್ಬೇನ್‌ನ ಪ್ರಸಿದ್ಧ ದಿ ಗಬ್ಬಾ ಮೈದಾನದಲ್ಲಿ ಪ್ರಾರಂಭವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದು, ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದೆ.
ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಆದರೆ ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಈಗ ಐದನೇ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿಯನ್ನು 3-1 ಅಂತರದಿಂದ ಗೆಲ್ಲಲಿದೆ. ಅತ್ತ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ ಸರಣಿ 2-2 ಅಂತರದಲ್ಲಿ ಡ್ರಾ ಆಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಇನ್ನು ಭಾರತದ ಪಾಳಯದಲ್ಲಿ ಸಣ್ಣ ಬದಲಾವಣೆ ನಡೆದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಆಡಿದ್ದ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ ಶಕ್ತಿಯುತ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿದ್ದಾರೆ.
ಆಸ್ಟ್ರೇಲಿಯಾ ಪ್ಲೇಯಿಂಗ್ XI:
ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಜೋಶ್ ಫಿಲಿಫೆ, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆ್ಯಡಂ ಝಂಪಾ.
ಭಾರತ ಪ್ಲೇಯಿಂಗ್ XI:
ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಬ್ರಿಸ್ಬೇನ್‌ನ ಪಿಚ್ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿದ್ದರೂ, ಮಧ್ಯ ಓವರ್‌ಗಳಲ್ಲಿ ಸ್ಪಿನ್ ಬೌಲರ್‌ಗಳ ಪಾತ್ರ ಕೂಡಾ ನಿರ್ಣಾಯಕವಾಗಬಹುದು. ಹೀಗಾಗಿ ಈ ಪಂದ್ಯವು ಕೇವಲ ಗೆಲುವಿನ ಪೈಪೋಟಿಯಲ್ಲ, ಬಲಿಷ್ಠತೆಯ ಪರೀಕ್ಷೆಯೂ ಆಗಿದೆ.

