ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟಿ20 ಪಂದ್ಯ ನವೆಂಬರ್ 6ರಂದು ಗೋಲ್ಡ್ ಕೋಸ್ಟ್‌ನ ಬಿಲ್ ಪಿಪ್ಪನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಬದಲಾವಣೆ ಕಂಡುಬಂದಿದೆ. ಸ್ಟಾರ್ ಆಟಗಾರರಾದ ಟ್ರಾವಿಸ್ ಹೆಡ್, ಶಾನ್ ಅಬಾಟ್ ಮತ್ತು ತನ್ವೀರ್ ಸಂಘ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಈ ಮೂವರೂ ಭಾರತ ಸರಣಿಯ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಈಗ ಅಧಿಕೃತವಾಗಿದೆ.
ಆಸ್ಟ್ರೇಲಿಯಾ ತಂಡದ ಪ್ರಮುಖ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಲು ಬಿಡುಗಡೆ ಮಾಡಲಾಗಿದೆ. ಅವರು ಈಗ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ನಲ್ಲಿ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ವೇಗದ ಬೌಲರ್ ಶಾನ್ ಅಬಾಟ್ ಅವರಿಗೂ ಆ್ಯಶಸ್ ಸರಣಿಯ ಸಿದ್ಧತೆಯ ಭಾಗವಾಗಿ ಟಿ20 ತಂಡದಿಂದ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ಅವರ ಬದಲಿಗೆ ಅಬಾಟ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಂತೆಯೇ, ಮೊದಲ ಮೂರು ಟಿ20 ಪಂದ್ಯಗಳಲ್ಲಿ ಆಡದ ಆ್ಯಡಂ ಝಂಪಾ ಈಗ ತಂಡಕ್ಕೆ ಮರಳಿದ್ದು, ಅವರ ಬದಲಿಗೆ ಆಯ್ಕೆಯಾಗಿದ್ದ ತನ್ವೀರ್ ಸಂಘ ಅವರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ಮೂವರು ಸ್ಟಾರ್ ಆಟಗಾರರು ನಾಲ್ಕನೇ ಟಿ20ಯಲ್ಲಿ ಇರುವುದಿಲ್ಲ.
ಪ್ರಸ್ತುತ ಆಸ್ಟ್ರೇಲಿಯಾ ಟಿ20 ತಂಡ ಈ ರೀತಿ ಇದೆ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ, ಮಹ್ಲಿ ಬಿಯರ್ಡ್‌ಮನ್ ಮತ್ತು ಬೆನ್ ದ್ವಾರ್ಶುಯಿಸ್.

