March 26, 2026
Thursday, March 26, 2026
spot_img

ಭಾರತ vs ಇಂಗ್ಲೆಂಡ್ ಸಮರ: ಟೀಮ್ ಇಂಡಿಯಾ ಸೋಲಿಸಲು ನಡೆದಿದೆಯಾ ‘ಪಿಚ್ ಕುತಂತ್ರ’?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಪಂದ್ಯಕ್ಕೂ ಮುನ್ನವೇ ಮೈದಾನದ ಹೊರಗಿನ ಬೆಳವಣಿಗೆಗಳು ಭಾರೀ ಚರ್ಚೆಗೆ ಕಾರಣವಾಗಿವೆ. ತವರಿನ ಅಂಗಳದಲ್ಲಿ ಫೈನಲ್‌ಗೇರುವ ಕನಸಿನಲ್ಲಿರುವ ಭಾರತಕ್ಕೆ ಪಿಚ್ ಹೊಸ ತಲೆನೋವು ತಂದಿಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಕ್ರಿಕೆಟ್ ವಲಯದಲ್ಲಿ ತಲ್ಲಣ ಮೂಡಿಸಿದೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಪಿಚ್ ಪರಿಶೀಲನೆ ನಡೆಸುವ ವೇಳೆ ಕ್ಯುರೇಟರ್ ಜೊತೆ ತೀವ್ರ ವಾಗ್ವಾದಕ್ಕಿಳಿದಿರುವುದು ಕಂಡುಬಂದಿದೆ. ಫೋಟೋದಲ್ಲಿ ಗಂಭೀರ್ ಮುಖಭಾವವು ಅವರು ಪಿಚ್ ಬಗ್ಗೆ ಅಸಮಾಧಾನಗೊಂಡಿರುವುದನ್ನು ಸ್ಪಷ್ಟಪಡಿಸುತ್ತಿದೆ.

ಸಾಮಾನ್ಯವಾಗಿ ವಾಂಖೆಡೆ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗ. ಇಲ್ಲಿ ರನ್ ಮಳೆ ಹರಿಯುವುದು ಸಾಮಾನ್ಯ. ಆದರೆ, ಈ ಬಾರಿ ಪಿಚ್ ಮೇಲೆ ದಟ್ಟವಾದ ಹಸಿರು ಹುಲ್ಲಿನ ಪದರ ಕಂಡುಬಂದಿದೆ. ಇದು ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಸ್ವಿಂಗ್ ಮತ್ತು ಬೌನ್ಸ್ ಮೂಲಕ ಬ್ಯಾಟರ್‌ಗಳನ್ನು ಕಾಡಲಿದೆ.

ಪವರ್‌ಪ್ಲೇನಲ್ಲಿ ಭಾರತದ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಈ ಹುಲ್ಲಿನ ಪಿಚ್ ಬ್ರೇಕ್ ಹಾಕಬಹುದು. ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಪಡೆ ವಿಶ್ವದರ್ಜೆಯದಾಗಿದ್ದು, ಇಂತಹ ಪಿಚ್‌ನ ಲಾಭ ಪಡೆದು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಅವರು ಹೊಂಚು ಹಾಕುತ್ತಿದ್ದಾರೆ.

ಸೆಮಿಫೈನಲ್‌ನಂತಹ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಪೂರಕವಾದ ಸ್ಪಿನ್ ಸ್ನೇಹಿ ಅಥವಾ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸುವ ಬದಲು, ವೇಗಿಗಳಿಗೆ ಸಹಕಾರಿಯಾದ ಪಿಚ್ ತಯಾರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತಯಾರಿಯಲ್ಲಿರುವ ಭಾರತಕ್ಕೆ, ಈ ಪಿಚ್ ದೊಡ್ಡ ವಿಘ್ನವಾಗಿ ಪರಿಣಮಿಸಲಿದೆಯಾ ಎಂಬುದು ಅಭಿಮಾನಿಗಳ ಆತಂಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !