ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್‌ನ ಜಿದ್ದಾಜಿದ್ದಿನ ಹೋರಾಟ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ಬಲಿಷ್ಠ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.
ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಈ ಟೂರ್ನಿಯಲ್ಲಿ ಅಜೇಯ ಆಟ ಪ್ರದರ್ಶಿಸಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಈ ಪಂದ್ಯ ಕೇವಲ ಗೆಲುವಿಗಾಗಿ ಮಾತ್ರವಲ್ಲ, ಹೊಸ ದಾಖಲೆ ಬರೆಯಲು ಕೂಡಾ ಒಂದು ವೇದಿಕೆಯಾಗಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಹಾಲಿ ಚಾಂಪಿಯನ್ ತಂಡವೊಂದು ಮುಂದಿನ ಆವೃತ್ತಿಯ ಫೈನಲ್ ತಲುಪಿದ ಉದಾಹರಣೆಯಿಲ್ಲ. ಒಂದು ವೇಳೆ ಭಾರತ ಈ ಪಂದ್ಯ ಗೆದ್ದರೆ, ಈ ‘ಬ್ಯಾಡ್ ಲಕ್’ ದಾಖಲೆಯನ್ನು ಅಳಿಸಿ ಹಾಕಿ ಸತತ ಎರಡು ಬಾರಿ ಫೈನಲ್ ತಲುಪಿದ ಏಷ್ಯಾದ ಮೂರನೇ ತಂಡ ಎನಿಸಿಕೊಳ್ಳಲಿದೆ.
ಕುತೂಹಲಕಾರಿ ವಿಷಯವೆಂದರೆ, ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸತತ ಮೂರನೇ ಬಾರಿಗೆ ಪರಸ್ಪರ ಎದುರಾಗುತ್ತಿವೆ. ಐಸಿಸಿ ನಾಕೌಟ್ ಪಂದ್ಯಗಳ ಲೆಕ್ಕಾಚಾರ ನೋಡಿದರೆ, ಉಭಯ ತಂಡಗಳು ಸಮಬಲದ ಹೋರಾಟ ನಡೆಸಿವೆ.
ನಾಕೌಟ್ ಮುಖಾಮುಖಿ: 4 ಪಂದ್ಯಗಳು (ಭಾರತ 2 – ಇಂಗ್ಲೆಂಡ್ 2)
ವಾಂಖೆಡೆ ಮೈದಾನದಲ್ಲಿ: 2 ಪಂದ್ಯಗಳು (ಭಾರತ 1 – ಇಂಗ್ಲೆಂಡ್ 1)
ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಈಗಾಗಲೇ ತಲಾ ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿವೆ. ಈ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸುವ ತಂಡಕ್ಕೆ ಮೂರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಐತಿಹಾಸಿಕ ಅವಕಾಶ ಸಿಗಲಿದೆ. ತವರು ನೆಲದ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ, ವಾಂಖೆಡೆಯ ಮಣ್ಣಿನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವದಾಖಲೆ ಬರೆಯುತ್ತದೆಯೇ ಎಂದು ಕಾದು ನೋಡಬೇಕಿದೆ.



