ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಬಹು ನಿರೀಕ್ಷಿತ ಸರಣಿ ಜನವರಿ 11ರಿಂದ ಆರಂಭವಾಗಲಿದ್ದು, ಈ ಸರಣಿಗೆ ಮುನ್ನವೇ ಟೀಮ್ ಇಂಡಿಯಾ ಆಯ್ಕೆಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸೂಚನೆಗಳು ಲಭಿಸಿವೆ. ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಮೊದಲು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಒಟ್ಟು ಎಂಟು ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಲಭ್ಯವಾಗಿರುವ ವರದಿಗಳ ಪ್ರಕಾರ, ನ್ಯೂಝಿಲೆಂಡ್ ವಿರುದ್ಧದ ಒಡಿಐ ಸರಣಿಯಿಂದ ಭಾರತದ ಮೂವರು ಪ್ರಮುಖ ಆಟಗಾರರು ಹೊರಗುಳಿಯುವ ಸಾಧ್ಯತೆ ಇದೆ. ವೇಗಿ ಜಸ್‌ಪ್ರೀತ್ ಬುಮ್ರಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಈ ಸರಣಿಗೆ ಪರಿಗಣಿಸದಿರುವ ಸಾಧ್ಯತೆ ಬಗ್ಗೆ ಆಯ್ಕೆ ಸಮಿತಿ ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಪಂತ್ ಬದಲಿಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮತ್ತೆ ಏಕದಿನ ತಂಡಕ್ಕೆ ಕರೆತರಲು ಚಿಂತನೆ ನಡೆದಿದೆ. ಇದರಿಂದ ಇಶಾನ್ ಕಿಶನ್ ಈ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆಯ್ಕೆ ಸಮಿತಿ ಶೀಘ್ರದಲ್ಲೇ ಅಧಿಕೃತ ತಂಡ ಘೋಷಿಸುವ ನಿರೀಕ್ಷೆ ಇದ್ದು, ಹೊಸ ಸಂಯೋಜನೆಯೊಂದಿಗೆ ಕಿವೀಸ್ ವಿರುದ್ಧ ಭಾರತ ಕಣಕ್ಕಿಳಿಯುವ ಸಾಧ್ಯತೆ ಇದೆ.

