ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಭಾರತ–ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿ ಸರಣಿಗೆ ಆತ್ಮವಿಶ್ವಾಸದ ಆರಂಭ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಬಿರುಸಿನ ಬ್ಯಾಟಿಂಗ್ ಮೂಲಕ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 238 ರನ್ ಸೇರಿಸಿ ಕಿವೀಸ್ ತಂಡಕ್ಕೆ ಭಾರೀ ಸವಾಲು ಎಸೆದಿತು.
ಭಾರತದ ಪರ ಯುವ ಓಪನರ್ ಅಭಿಷೇಕ್ ಶರ್ಮಾ ಅಬ್ಬರದ ಇನ್ನಿಂಗ್ಸ್ ಆಡಿದರು. ಅವರು ಕೇವಲ 35 ಎಸೆತಗಳಲ್ಲಿ 84 ರನ್ ಸಿಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಸಹಕಾರಿ ಪಾತ್ರ ವಹಿಸಿ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಅತ್ಯಧಿಕ ಸ್ಕೋರ್ ಎಂಬುದು ವಿಶೇಷ.
239 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಡಿವೋನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಶೀಘ್ರವೇ ಪೆವಿಲಿಯನ್ ಸೇರಿದರು. ಮಧ್ಯದಲ್ಲಿ ಗ್ಲೆನ್ ಫಿಲಿಪ್ಸ್ ಆಕ್ರಮಣಕಾರಿ ಅರ್ಧಶತಕದೊಂದಿಗೆ ಹೋರಾಟ ನಡೆಸಿದರೂ, ಭಾರತ ಬೌಲರ್‌ಗಳ ನಿಯಂತ್ರಿತ ದಾಳಿ ಪಂದ್ಯವನ್ನು ಕೈ ತಪ್ಪಿಸಿತು. ಫಿಲಿಪ್ಸ್ 78 ರನ್ ಗಳಿಸಿ ಔಟಾದ ನಂತರ ಕಿವೀಸ್ ಗೆಲುವಿನ ನಿರೀಕ್ಷೆ ಕ್ಷೀಣಿಸಿತು.
ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ 48 ರನ್ ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.


